ನವದೆಹಲಿ: ಹಜ್ ಸಬ್ಸಿಡಿ ಕಡಿತ ಗೊಳಿಸದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಜ್ ಯಾತ್ರೆ ವಿಮಾನ ಪ್ರಯಾಣ ದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಆಸಕ್ತಿ ಹೊಂದಿದ್ದಾರೆ. ಯಾವುದೇ ಶಿಫಾರಸ್ಸು ಇಲ್ಲದೇ ಈ ನಿರ್ಧರವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
Advertisement
Advertisement
ಭಾರತದ 21 ವಿಮಾನ ನಿಲ್ದಾಣಗಳಿಂದ ಹೊರಡುವ ಏರ್ ಇಂಡಿಯಾ, ಸೌದಿ ಏರ್ ಲೈನ್ಸ್ ಮತ್ತು ಫ್ಲೈನಾಸ್ ವಿಮಾನಯಾನ ಸಂಸ್ಥೆಗಳಲ್ಲಿ ಈ ನಿಯಮಗಳು ಅನ್ವಯಿಸುತ್ತವೆ ಎಂದರು.
Advertisement
ಸರ್ಕಾರದ ಈ ಕ್ರಮದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಜ್ ಯಾತ್ರೆ ಹೆಸರಿನಲ್ಲಿ ನಡೆಸುತ್ತಿದ್ದ ಆರ್ಥಿಕ ಹಾಗೂ ರಾಜಕೀಯ ಶೋಷಣೆ ಕೊನೆಗೊಳ್ಳುತ್ತದೆ ಎಂದು ಹೇಳಿದರು.
Advertisement
ಪ್ರಯಾಣ ದರ ಎಷ್ಟು? ಅಹಮದಾಬಾದ್ ನಿಂದ 2013-14 ನೇ ಸಾಲಿನಲ್ಲಿದ್ದ 98,750 ರೂ. ದರದಿಂದ 65,015 ರೂ.ಗೆ ಇಳಿಯಲಿದೆ. ಮುಂಬೈ ನಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ 98,750 ರೂ. ಗಳಿಂದ ದರ 57,857 ರೂ. ಗೆ ಇಳಿಕೆ ಆಗಲಿದೆ.
ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಅನ್ವಯ ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ವೇಳೆ 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿತ್ತು. ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು.
ಸಬ್ಸಿಡಿ ರದ್ದಾಗಿದ್ದು ಯಾಕೆ?
ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.
ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದ್ದರು.