– ಎನ್‌ಡಿಎ, ಇಂಡಿಯಾ ಒಕ್ಕೂಟಗಳ ನಡುವೆ ವಾಕ್ಸಮರ, ಜಟಾಪಟಿಗೆ ವೇದಿಕೆ ಸಜ್ಜು
ನವದೆಹಲಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ (Parliament Mansoon Session) ಆರಂಭವಾಗಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಸಭೆಗೆ ವೇದಿಕೆಯಾಗಲಿದೆ.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನವು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ, ಮತ್ತು ಟಿಎಂಸಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತ, ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಸ್ಥಿಕೆಯ ಬಗ್ಗೆ ಆಡಳಿತ ಪಕ್ಷವನ್ನು ತೀವ್ರವಾಗಿ ಪ್ರಶ್ನಿಸಲು ಸಿದ್ಧವಾಗಿವೆ. ಇದರ ಜೊತೆಗೆ, ಪಹಲ್ಗಾಮ್‌ನ ಭಯೋತ್ಪಾದಕ ದಾಳಿ ಮತ್ತು ವಿದೇಶಾಂಗ ನೀತಿಯಂತಹ ವಿಷಯಗಳನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಈ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ತನ್ನ ಸಾಧನೆಗಳನ್ನು ಮಂಡಿಸಿ ವಿರೋಧ ಪಕ್ಷಗಳ ವಿಮರ್ಶೆಗೆ ಉತ್ತರ ನೀಡಲು ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಎಂಟು ಮಸೂದೆಗಳನ್ನು ಮಂಡಿಸುವ ಲೆಕ್ಕಚಾರದಲ್ಲಿದೆ. ಆದಾಯ ತೆರಿಗೆ ಮಸೂದೆ 2025 ಕೂಡ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯ ಆಯ್ದ ಸಮಿತಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್ ರಿಜಿಜು
ಮಣಿಪುರದಲ್ಲಿ ಫೆಬ್ರವರಿ 13ರಂದು ಜಾರಿಗೊಂಡ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆಗೆ ಸಂಸತ್‌ನ ಅನುಮೋದನೆಯನ್ನು ಸರ್ಕಾರ ಕೋರಲಿದೆ. ಈ ವಿಷಯವು ವಿರೋಧ ಪಕ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಲಿದೆ. ಸಂಸತ್‌ನ ಈ ಮುಂಗಾರು ಅಧಿವೇಶನವು ಒಟ್ಟು 21 ಕಲಾಪಗಳನ್ನು ಒಳಗೊಂಡಿದ್ದು, ಆಗಸ್ಟ್ 12ರಿಂದ 18ರವರೆಗೆ ರಕ್ಷಾಬಂಧನ ಮತ್ತು ಸ್ವಾತಂತ್ರ‍್ಯ ದಿನಾಚರಣೆಗಾಗಿ ವಿರಾಮ ಘೋಷಿಸಲಾಗಿದೆ. ಈ ಅವಧಿಯಲ್ಲಿ, ಗೋವಾದ ಶಾಸಕಾಂಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2024, ವಾಣಿಜ್ಯ ನೌಕಾಯಾನ ಮಸೂದೆ 2024, ಮತ್ತು ಭಾರತೀಯ ಬಂದರು ಮಸೂದೆ 2025 ಕೂಡ ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ನೋಟಿಸ್ ವಿಚಾರಕ್ಕೆ ಸಿಎಂ ರಿಯಾಕ್ಷನ್
ಪ್ರಮುಖ ಮಸೂದೆಗಳು:
*ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2025: ರಾಜ್ಯದ ಜಿಎಸ್‌ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಗುರಿ.
*ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025: ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ ಅನುಸರಣೆಯನ್ನು ಸುಧಾರಿಸುವ ಉದ್ದೇಶ.
*ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ, 2025: ಐಐಎಂ ಗುವಾಹಟಿಯನ್ನು ಐಐಎಂ ಕಾಯ್ದೆಯ ಅಡಿಯಲ್ಲಿ ಔಪಚಾರಿಕವಾಗಿ ಒಳಗೊಳ್ಳುವ ಗುರಿ.
*ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025: ತೆರಿಗೆ ಕಾನೂನುಗಳ ಸರಳೀಕರಣಕ್ಕೆ ಒತ್ತು.
*ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ; ಭೂವೈಜ್ಞಾನಿಕ ತಾಣಗಳ ಸಂರಕ್ಷಣೆ.
*ಕಲ್ಲುಗಣಿ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ.
*ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ: ಕ್ರೀಡಾ ಆಡಳಿತದಲ್ಲಿ ಸುಧಾರಣೆಗೆ ಒತ್ತು.
*ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ: ಕ್ರೀಡೆಯಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಕ್ರಮ