ಬೆಂಗಳೂರು/ಮಂಗಳೂರು/ಉಡುಪಿ: ಈ ಬಾರಿಯ ಮಳೆಗಾಲ ಅಧಿಕೃತವಾಗಿ ಶುರುವಾಗಿದೆ. ಕೇರಳದಲ್ಲಿ ಮುಂಗಾರು ಮಳೆ ಶುರುವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢೀಕರಿಸಿದೆ. ದೇಶಕ್ಕೆ ನೈಋತ್ಯ ಮುಂಗಾರು ಮಳೆ ಆಗಮನವಾಗಿದೆ. 3 ದಿನ ಮೊದಲೇ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆಯಿದೆ. ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡಿದೆ. ಮುಂದಿನ ಎರಡು ದಿನಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಮುಂಗಾರು ಮೇ 29ಕ್ಕೆ ಆಗಮಿಸಲಿದೆ. ಈ ಬಾರಿ ಸಾಮಾನ್ಯ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮನ್ಸೂಚನೆ ನೀಡಿತ್ತು. ಸಾಮಾನ್ಯವಾಗಿ ಜೂನ್ 1ರಂದು ಕೇರಳ ಮೂಲಕ ಮುಂಗಾರು ಪ್ರವೇಶವಾಗುತ್ತಿತ್ತು.
Advertisement
Advertisement
ಅರಬಿ ಸಮುದ್ರ, ಮಾಲ್ಡೀವ್ಸ್, ಲಕ್ಷದ್ವೀಪ, ಕೇರಳದ ಬಹುತೇಕ ಭಾಗಕ್ಕೆ ನೈಋತ್ಯ ಮುಂಗಾರು ಇಂದು ಪ್ರವೇಶಿಸಿದೆ. ತಮಿಳುನಾಡಿನ ಕೆಲವು ಭಾಗ, ಬಂಗಾಳ ಕೊಲ್ಲಿಯ ಹಲವೆಡೆ ಮಳೆ ಶುರುವಾಗಿದೆ. ಸಾಮಾನ್ಯ ಮಳೆಗಾಲಕ್ಕಿಂತ ಈ ಬಾರಿ 3 ದಿನ ಮುಂಚಿತವಾಗಿ ಮುಂಗಾರು ಪ್ರವೇಶವಾಗಿದೆ ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಮುಂಗಾರು ಇನ್ನಷ್ಟು ಬಲಗೊಳ್ಳಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
Advertisement
ಕಳೆದೆರಡು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ನೀರು ನುಗ್ಗಿದ್ದು, ರೋಗಿಗಳನ್ನು ಆಸ್ಪತ್ರೆಯಿಂದ ಬೇರೆ ಕಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ. ಸುರತ್ಕಲ್, ಕುಂಠಿಕಾನ, ಕೊಟ್ಟಾರದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಇಂದು ಬೆಳಗ್ಗೆ 10 ಗಂಟೆಗೆ ಸುರಿಯಲಾರಂಭಿಸಿದ ಮಳೆ ಸತತ 3 ಗಂಟೆಗಳಿಂದ ಎಡೆಬಿಡದೇ ಸುರಿಯುತ್ತಿದೆ. ಸಂಜೆವರೆಗೆ ಇದೇ ರೀತಿ ಮಳೆ ಸುರಿದರೆ ಜನರು ಬಾರೀ ಸಂಕಷ್ಟ ಎದುರಿಸಬೇಕಾದೀತು. ಮೆಕುನು ಚಂಡಮಾರುತದ ಪ್ರಭಾವವೇ ರಾಜ್ಯದ ಕರಾವಳಿಯಲ್ಲಿ ಮಳೆಗ ಪ್ರಮುಖ ಕಾರಣ ಎನ್ನಲಾಗಿದೆ. ಕಾಸರಗೋಡು ಸೇರಿದಂತೆ ಕೇರಳದ ಹಲವೆಡೆ ಭಾರೀ ಮಳೆಯಾಗುತ್ತಿದೆ.