ಬೆಂಗಳೂರು: ನಿರೀಕ್ಷೆಯಂತೆಯೇ ಕೇರಳಕ್ಕೆ ಮುಂಗಾರು ಮಳೆ ಶನಿವಾರ ಕಾಲಿಟ್ಟಿದೆ. ಈಗಾಗಲೇ ಕೇರಳದ ಹಲವೆಡೆ ವರುಣನ ಆರ್ಭಟ ಶುರುವಾಗಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯೆ ಇದೆ ಎಂದು ಖಾಸಗಿ ಸಂಸ್ಥೆಯೊಂದು ತಿಳಿಸಿದೆ.
ಈ ಹಿನ್ನಲೆಯಲ್ಲಿ ಕೇರಳದ 9 ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತ್ರಿಶ್ಯೂರು, ಮಲಪ್ಪುರಂ, ಕೋಝಿಕೋಡ್‍ನಲ್ಲಿ ಅತಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಸದ್ಯ ಕೇರಳದಲ್ಲಿ ನೈರುತ್ಯ ಮುಂಗಾರು ಮಾರುತಗಳು ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಚಲಿಸ್ತಿವೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಆದರೆ ಈ ಬಾರಿ ಮಾನ್ಸೂನ್ ಮಾರುತಗಳು ಕೊಂಚ ದುರ್ಬಲವಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯಕ್ಕೆ ಜೂನ್ 11ರನಂತರ ಬರುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ತಿಳಿಸಿದೆ.
ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಬೀದರ್ ನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಬ್ರೀಮ್ಸ್ ಮುಂಭಾಗದ ಚಾವಣಿ ಕುಸಿದಿದೆ. ತಡ ರಾತ್ರಿ ಘಟನೆ ನಡೆದಿರುವುದರಿಂದ ಸಾವು ನೋವು ತಪ್ಪಿದೆ.
ಬಾಗಲಕೋಟೆಯ ಕಲಾದಗಿಯಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದೆ. ಕೋಲಾರದಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಆಗಿದೆ. ಪಪ್ಪಾಯ, ಟೊಮ್ಯಾಟೋ, ಮಾವು ನಾಶವಾಗಿದೆ. ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಹಾಗೂ ಭಾರೀ ಬಿರುಗಾಳಿಗೆ ಬಾಳೆ ಪೈರು ನೆಲಕಚ್ಚಿದೆ. ಮೈಸೂರಿನ ನಂಜನಗೂಡಿನ ಶಿರಮಳ್ಳಿಯಲ್ಲಿ 40 ಎಕರೆ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಮಳೆ ಹೊಡೆತಕ್ಕೆ ರೈತರು ಕಂಗಾಲಾಗಿದ್ದಾರೆ.
ದಾವಣಗೆರೆಯಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ವರುಣನ ಓಲೈಸಿಕೊಳ್ಳಲು ಮಕ್ಕಳು ಅರೆ ಬೆತ್ತಲಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಉಡುಪಿಯ ಕಿದಿಯೂರು ಹೋಟೆಲ್‍ನಲ್ಲಿ ವರುಣನ ಕೃಪೆಗಾಗಿ ಕಪ್ಪೆ ಮದುವೆ ನಡೆಸಲಾಗಿದೆ. ವರ್ಷಾ ಹೆಸರಿನ ವಧು ಕಪ್ಪೆ, ಹಾಗೂ ವರುಣ ಹೆಸರಿನ ವರ ಕಪ್ಪೆಯ ವಿವಾಹ ಅದ್ಧೂರಿಯಾಗಿ ನಡೆದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕಪ್ಪೆಗಳ ದಿಬ್ಬಣ ಹೋಯಿತು. ಬಳಿಕ ಮಣಿಪಾಲದ ಮಣ್ಣಪಳ್ಳ ಹಳ್ಳಕ್ಕೆ ಎರಡೂ ಕಪ್ಪೆಗಳನ್ನು ಮಧುಚಂದ್ರಕ್ಕೆ ಬಿಡಲಾಗಿದೆ.