ಬೆಂಗಳೂರು: ರಾಜ್ಯಕ್ಕೆ ಮತ್ತೆ ಮಳೆಯ ಶಾಕ್ ಎದುರಾಗಿದ್ದು, ಮುಂಗಾರು ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಜೂನ್ ಒಂದರಿಂದ ಮುಂಗಾರು ಆರಂಭವಾಗಬೇಕಿತ್ತು. ಆದರೆ ಈ ವರ್ಷ ಕೊಂಚ ವಿಳಂಬವಾಗಿದ್ದು, ಜೂನ್ 8ರಂದು ಕೇರಳ ಪ್ರವೇಶಿಸಲಿವೆ. ಅದಾದ ಎರಡು ದಿನದ ಬಳಿಕ ರಾಜ್ಯಕ್ಕೆ ಮುಂಗಾರು ಕಾಲಿಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇಂದಿನಿಂದ ನೈಋತ್ಯ ಮಾರುತಗಳು ದಕ್ಷಿಣ ದ್ವೀಪಕಲ್ಪವನ್ನು ಪ್ರವೇಶಿಸಲು ಅವಶ್ಯವಿರುವ ಸನ್ನಿವೇಶಗಳು ಈಗ ಅನುಕೂಲಕರವಾಗಿವೆ. ಅಂತೆಯೇ ಅಲ್ಲಿಂದ ಮುಂದಿನ 72 ತಾಸುಗಳ ಬಳಿಕ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ.
ಕೇರಳಕ್ಕೆ ಮುಂಗಾರು ಪ್ರವೇಶವಾದ ಎರಡು ದಿನದ ಬಳಿಕ ಕರ್ನಾಟಕಕ್ಕೆ ಮುಂಗಾರು ಎಂಟ್ರಿಯಾಗುತ್ತದೆ. ಹಾಗಾಗಿ ಜೂನ್ 8ರಿಂದ ಮುಂಗಾರಿನ ಆರಂಭವಾಗಲಿದೆ. ಮೊದಲ ವಾರ ಮುಂಗಾರು ಕೊಂಚ ಕಡಿಮೆಯಿರಲಿದೆ. ಆದರೆ ಜೂನ್ ಎರಡನೇ ವಾರದಲ್ಲಿ ಮುಂಗಾರು ಆರ್ಭಟ ಹೆಚ್ಚಾಗಲಿದೆ. ಮೇಲ್ಮೈ ಸುಳಿಗಾಳಿ ಇರುವುದರಿಂದ ಜೂನ್ ಎರಡನೇಯ ವಾರ ಪ್ರಬಲ ಮುಂಗಾರು ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.