ನವದೆಹಲಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆಗಾಲ ಜೂನ್ ಬರುವಷ್ಟರಲ್ಲಿ ನಮ್ಮ ಪರಿಸ್ಥಿತಿ ಏನು ಎಂದು ಜನ ಯೋಚನೆ ಮಾಡುತ್ತಿದ್ದ ವೇಳೆಯಲ್ಲೇ ಶಾಕಿಂಗ್ ವರದಿಯೊಂದು ಬಂದಿದ್ದು, ಈ ಬಾರಿ ಮುಂಗಾರು ಮಳೆ ಸುಮಾರು 1 ತಿಂಗಳು ತಡವಾಗಿ ಪ್ರವೇಶವಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಮಾಹಿತಿ ನೀಡಿದೆ.
ಜೂನ್‍ನಲ್ಲಿ ಅಂತ್ಯದವರೆಗೆ ಮಳೆ ಪ್ರವೇಶ ಮಾಡುವುದು ಅನುಮಾನವಾಗಿದ್ದು, ಜುಲೈ, ಆಗಸ್ಟ್‍ನಲ್ಲಿ ಮಳೆ ಆಗಲಿದೆ. ಇದರಿಂದಾಗಿ, ವಾಡಿಕೆಗಿಂತ ವಾರ್ಷಿಕ ಮಳೆಯ ಪ್ರಮಾಣ ಶೇ.7ರಷ್ಟು ಕಡಿಮೆಯಾಗಲಿದೆ ಎಂದಿದೆ. ಅಲ್ಲದೇ ಇದಕ್ಕೆ ಏಲ್ ನಿನೋ ವಿದ್ಯಮಾನವೇ ಸಂಭವನೀಯ ಕಾರಣ ಎಂದು ತಿಳಿಸಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಶೇ.55 ರಷ್ಟಿದೆ ಸ್ಕೈಮೆಟ್ ತಿಳಿಸಿದೆ.
ಏನಿದು ಏಲ್ ನಿನೋ?
ಏಲ್ ನಿನೋ ಎಂದರೆ ಶಾಂತ ಸಾಗರದ ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ತಾಪಮಾನದಲ್ಲಾಗುವ ಹೆಚ್ಚಳ ಎಂದು ಹೇಳಬಹುದಾಗಿದೆ. ಅಂದರೆ ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಹೆಚ್ಚಾದಂತೆ ಮಳೆ ತರುವ ಮಾರುತಗಳು ಬಂಗಾಳಕೊಲ್ಲಿಯನ್ನು ಪ್ರವೇಶಿಸುವುದು ತಡವಾಗುತ್ತದೆ. ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಇದು ಹೆಚ್ಚಾಗಿ ಸಂಭವಿಸುವುದರಿಂದ ಈ ಹೆಸರು ನೀಡಲಾಗಿದ್ದು, ಏಲ್ ನಿನೋ ಬಾಲ ಯೇಸುವಿನ ಸ್ಪ್ಯಾನಿಷ್ ಪದವಾಗಿದೆ.
ಈ ಪ್ರಕ್ರಿಯೆ ನಡೆದರೆ ಮಳೆ ಸೃಷ್ಟಿಸುವ ಮಾರುತಗಳ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ ಇದ್ದು, ಪರಿಣಾಮ ಮುಂಗಾರು ಪ್ರವೇಶ ಏರುಪೇರಾಗಿ ಮಳೆ ದುರ್ಬಲಗೊಳ್ಳಬಹುದು. ಅಲ್ಲದೇ ಪೆಸಿಫಿಕ್ ಸಾಗರದಲ್ಲಿನ ಉಷ್ಣಾಂಶದ ಏರಿಕೆ ಇಲ್ಲಿನ ತಾಪಮಾನದಲ್ಲಿಯೂ ಏರುಪೇರಾಗುತ್ತದೆ.