ಜೂನ್ 7, 8ರಂದು ಕರ್ನಾಟಕಕ್ಕೆ ಮುಂಗಾರು ಎಂಟ್ರಿ!

Public TV
2 Min Read
weather

– ಮಳೆ ಅಬ್ಬರ – ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

ಬೆಂಗಳೂರು: ಪೂರ್ವ ಮುಂಗಾರು ಮಳೆಯ ಅಬ್ಬರದ ನಡುವೆ ರಾಜ್ಯಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಜೂನ್ 7 ಅಥವಾ 8ರಂದು ಮುಂಗಾರು ಮಾರುತಗಳು (Monsoon) ಕರ್ನಾಟಕ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ಮೇ 19ರಂದು ನೈಋತ್ಯ ಮುಂಗಾರು ಮಾರುತಗಳು (Southwest Monsoon 2024) ಅಂಡಮಾನ್ ನಿಕೋಬಾರ್ ಮೂಲಕ ಭಾರತವನ್ನು ಪ್ರವೇಶ ಮಾಡಲಿವೆ. ಮೇ 31 ರಂದು ಕೇರಳಕ್ಕೆ ಮಾರುತಗಳು ತಾಕಲಿವೆ. ಜೂನ್ ಮೊದಲ ವಾರದಲ್ಲಿ ಈ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿವೆ. ಆದ್ದರಿಂದ ಜೂನ್ 7 ಅಥವಾ 8 ರಂದು ಮುಂಗಾರು ಮಳೆ ಶುರುವಾಗಲಿದೆ. ಈ ಬಾರಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

KRS

ಇದೇ ವೇಳೆ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಭಾರೀ ಮಳೆಗೆ ರಸ್ತೆ ನದಿಯೋಪಾದಿಯಲ್ಲಿ ತುಂಬಿ ಹರಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದಾರೆ. ಕೆಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ.

ಕಾವೇರಿ ಕೊಳ್ಳ ಪ್ರದೇಶದಲ್ಲಿ ಉತ್ತಮ ವರ್ಷಧಾರೆ ಆಗಿರುವ ಕಾರಣ ಕೆಆರ್‌ಎಸ್ ಒಳಹರಿವು 1,771 ಕ್ಯೂಸೆಕ್‌ಗೆ ಹೆಚ್ಚಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣ ಎಂದು ಹೇಳಲಾಗಿದೆ. ಉತ್ತಮ ಮಳೆಯಿಂದಾಗಿ ಕೊಡಗಿನಲ್ಲಿಯೂ ಕಾವೇರಿ ನದಿಗೆ ಜೀವಕಳೆ ಬಂದಿದೆ. ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಕೊಡಗು, ಚಿಕ್ಕಮಗಳೂರು, ಹಾಸನ ಸೇರಿ ಹಲವೆಡೆ ಮಳೆ ಆಗ್ತಿದೆ. ಇನ್ನು, ಮುಂದಿನ ಐದು ದಿನ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

5 ದಿನಗಳ ವಾತಾವರಣ ಹೇಗಿರಲಿದೆ?
ಬೆಂಗಳೂರಿನಲ್ಲಿ ಶುಕ್ರವಾರ ಗರಿಷ್ಠ 27ಲಿ ಕನಿಷ್ಠ 21ಲಿ ಸೆಲ್ಸಿಯಸ್ ತಾಪಮಾನ ಇರಲಿದೆ. ಹಾಗೆಯೇ ಶನಿವಾರ ಗರಿಷ್ಠ 28ಲಿ – ಕನಿಷ್ಠ 22ಲಿ, ಭಾನುವಾರ ಗರಿಷ್ಠ 28ಲಿ – ಕನಿಷ್ಠ 22ಲಿ, ಸೋಮವಾರ ಗರಿಷ್ಠ 28ಲಿ – ಕನಿಷ್ಠ 21ಲಿ, ಮಂಗಳವಾರ ಗರಿಷ್ಠ 29ಲಿ – ಕನಿಷ್ಠ 21ಲಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಐದು ದಿನವೂ ಭಾರೀ ಮಳೆಯಾಗಲಿದೆ. ಶನಿವಾರ ಸಂಜೆ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿಯೇ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆರ್‌ಸಿಬಿಗೆ ಈ ಪಂದ್ಯ ನಿರ್ಣಾಯಕವಾಗಿರುವುದರಿಂದ ರಾತ್ರಿ 8 ರಿಂದ 12 ಗಂಟೆವರೆಗೆ ಮಳೆ ಬಿಡುವುಕೊಟ್ಟರೆ ಪೂರ್ಣ ಪಂದ್ಯ ನಡೆಯಲಿದೆ.

Share This Article