ಮಂಡ್ಯ: ಮಳವಳ್ಳಿ ತಾಲೂಕಿನ ಬಸವನ ಬೆಟ್ಟದಲ್ಲಿ ಬಿಸಿಲಿನ ತಾಪ ತಾಳಲಾರದೆ ಕೋತಿಗಳು ನೀರಿನ ತೊಟ್ಟಿಗಿಳಿದು ಸ್ನಾನ ಮಾಡುತ್ತ ಆಟವಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಬಸವನ ಬೆಟ್ಟದ ಬಳಿಯಿರುವ ಹೆಬ್ಬೆಟ್ಟೇ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋತಿಗಳು ಸ್ವಿಮ್ಮಿಂಗ್ ಕಂಡು ಬಂದಿದೆ. ಪ್ರವಾಸಿಗರೊಬ್ಬರು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸುಮಾರು 10-15 ಕೋತಿಗಳು ನೀರಿನ ತೊಟ್ಟಿ ಸುತ್ತಾ ಕುಳಿತಿದ್ದು, ಒಂದರಂದೆ ಒಂದು ತೊಟ್ಟಿಗೆ ಮುಳುಗಿ ಏಳುತ್ತಿವೆ. ಕೆಲವು ಕೋತಿಗಳು ತೊಟ್ಟಿಯಲ್ಲಿಯೇ ಸ್ವಿಮ್ಮಿಂಗ್ ಮಾಡುತ್ತಿವೆ. ಇನ್ನೂ ಜೋಡಿಯಾಗಿಯೂ ಮುಳುಗಿ-ಮುಳುಗಿ ಎದ್ದೇಳುತ್ತಿವೆ. ಬಿಸಿಲಿನ ತಾಪಕ್ಕೆ ಕೋತಿಗಳು ನೀರನ್ನು ಕಂಡ ಸಂತಸಕ್ಕೆ ತೊಟ್ಟಿಯಲ್ಲಿ ಮುಳುಗಿ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮಳೆ ಇಲ್ಲದೆ ಕಾಡು ಒಣಗಿದ್ದು, ಹಲವಾರು ಮರಗಳು ಎಲೆಗಳು ಉದುರಿ ನಿಂತಿವೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಂಗಗಳು ಮತ್ತು ಕಾಡು ಪ್ರಾಣಿಗಳು ಹಾಹಾಕಾರ ಪಡುತ್ತಿವೆ. ಈ ವೇಳೆ ದೇವಾಲಯದ ಸಮೀಪವಿರುವ ಕಾಡಿನಲ್ಲಿ ವಾಸವಿರುವ ಮಂಗಗಳು ನೀರಿನ ತೊಟ್ಟಿಗೆ ಜಿಗಿದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದಾವೆ ಎಂದು ಪ್ರವಾಸಿಗ ಲೋಕೇಶ್ ಹೇಳಿದ್ದಾರೆ.