-ಆಹಾರ ನೀಡಿ ರಕ್ಷಣೆ ಮಾಡುತ್ತಿರುವ ಯುವಕರು
ಕೊಪ್ಪಳ: ಮೂರು ಕೋತಿಗಳು ಕಳೆದ ಹದಿನೈದು ದಿನಗಳಿಂದ ಕೆಳಗಿಳಿಯಲಾಗದೆ ಒಂದೇ ಮರದಲ್ಲಿ ವಾಸ್ತವ್ಯ ಮಾಡುತ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ನೂತನ ತಾಲೂಕಿನ ಕುಕನೂರಿನ ಮುತ್ತಾಳ ಗ್ರಾಮದಲ್ಲಿ ಹದಿನೈದು ದಿನಗಳಿಂದ ಒಂದೇ ಮರದಲ್ಲಿ ಕೋತಿಗಳು ವಾಸ ಮಾಡುತ್ತಿವೆ. ಗ್ರಾಮದ ಸಮೀಪದ ಡ್ಯಾಂ ನಿಂದ ಹಿನ್ನೀರು ಬಂದ ಪರಿಣಾಮ ಕೋತಿಗಳು ಕೆಳಗಿಳಿಯಲಾಗದೆ ಮರದಲ್ಲಿ ವಾಸ ಮಾಡುತ್ತಿವೆ.
ಕೋತಿಗಳು ಜಮೀನಿನಲ್ಲಿ ಬೆಳೆದ ಅಲಸಂದಿ ಬೆಳೆಯನ್ನು ತಿನ್ನಲು ಬಂದಿದೆ. ಆ ಸಂದರ್ಭದಲ್ಲಿ ಜೋರು ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಕೋತಿಗಳು ಮರ ಏರಿವೆ. ಆದರೆ ಸುಮಾರು ನಾಲ್ಕು ತಾಸು ಮಳೆಯಾದ ಪರಿಣಾಮ ಜಮೀನಿನ ಸುತ್ತಲೂ ನೀರು ಆವರಿಸಿದೆ. ಹೀಗಾಗಿ ಕೋತಿಗಳು ಕೆಳಗಿಳಿಯಲು ಆಗುತ್ತಿಲ್ಲ.
ಒಂದು ವಾರದ ಹಿಂದೆ ಮುತ್ತಾಳ ಗ್ರಾಮದ ಯುವಕರು ಮರದಲ್ಲಿ ಕೋತಿಗಳು ಇರೋದನ್ನು ಕಂಡಿದ್ದಾರೆ. ಹದಿನೈದು ದಿನಗಳಿಂದ ಕೋತಿಗಳಿಗೆ ಆಹಾರವೇ ಇರಲಿಲ್ಲ. ಯುವಕರು ಕೋತಿಗಳನ್ನು ಕಂಡು ಕೋತಿಗಳಿಗೆ ಆಹಾರ ಒದಗಿಸುತ್ತಿದ್ದಾರೆ.
ನೀರಿನಲ್ಲಿ ತೆಪ್ಪದ ಮೂಲಕ ಮುತ್ತಾಳ ಗ್ರಾಮದ ಯುವಕರು ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಹೋಗಿ ಬಾಳೆಹಣ್ಣುಗಳನ್ನು ಕೊಟ್ಟು ಬರುತ್ತಿದ್ದಾರೆ. ಹದಿನೈದು ದಿನಗಳಿಂದ ಮರದಲ್ಲಿ ಬೀಡು ಬಿಟ್ಟ ಕೋತಿಗಳನ್ನು ಗ್ರಾಮದ ಯುವಕರು ಆಹಾರ ನೀಡಿ ರಕ್ಷಣೆ ಮಾಡುತ್ತಿದ್ದಾರೆ. ನೀರಿನಲ್ಲಿ ಹರಸಾಹಸ ಮಾಡಿ ಕೋತಿಗಳಿಗೆ ಬಾಳೆ ಹಣ್ಣು ಇಟ್ಟು ಬರ್ತಿದ್ದಾರೆ.
ಜನರನ್ನು ಕಂಡು ಬಾಳೆಹಣ್ಣು ಸ್ವೀಕರಿಸಲು ಕೋತಿಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಯುವಕರು ಮರದಲ್ಲಿ ಹಣ್ಣುಗಳನ್ನು ಇಟ್ಟು ಬರುತ್ತಿದ್ದಾರೆ.