– ಮಂಕಿ ಪಾರ್ಕ್ ಸ್ಥಾಪನೆಗೆ ಆಗ್ರಹ
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗಗಳ ಕಾಟ ವಿಪರೀತವಾಗುತ್ತಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಅತೀವೃಷ್ಟಿಯಿಂದ ಕಂಗೆಟ್ಟ ರೈತರಿಗೆ ಮಂಗಗಳ ಕಾಟ ಇನ್ನೊಂದು ರೀತಿಯ ಸವಾಲಾಗಿದ್ದು, ಬೆಳೆಗಳನ್ನು ರಕ್ಷಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ದಶಕದಿಂದಲೂ ಮಂಗಗಳ ಕಾಟವಿದ್ದು, ಕಳೆದೆರಡು ವರ್ಷಗಳಿಂದ ಮಿತಿಮೀರಿದೆ.
Advertisement
Advertisement
ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಕ್ಕೆ ನುಗ್ಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟಿದ್ದ ಕೆಂಪು ಮೂತಿ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು ಹೆಚ್ಚಿದೆ. ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು ಜಿಲ್ಲೆಯ ಅನ್ನದಾತರನ್ನು ಹೈರಣಾಗಿಸಿದೆ.
Advertisement
ಮಲೆನಾಡಿನ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಕಾಟದಿಂದ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಡಿಕೆ, ಎಳನೀರು, ಶುಂಠಿ, ತರಕಾರಿಗಳನ್ನು ಕಿತ್ತು ತಿನ್ನುವ ಮಂಗಗಳು, ಬಾಳೆಮರದ ಮೊಳಕೆಗಳನ್ನು ಸಹ ಬಿಡುತ್ತಿಲ್ಲ. ನಾಯಿ, ಏರ್‍ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ಇಂದು ರೈತರ ನಿದ್ದೆಗೆಡಿಸಿವೆ. ಕೆಲವು ಬೆಳೆಗಳನ್ನು ಎಳವೆಯಲ್ಲಿಯೇ ಕಿತ್ತು ತಿಂದರೆ, ಇನ್ನೇನು ಫಸಲು ಕಟಾವಿಗೆ ಬರಬೇಕು ಎನ್ನುವ ಹಂತದಲ್ಲಿ ಏಕಾಏಕಿ ದಾಳಿ ಬೆಳೆಗಳನ್ನು ನಾಶ ಮಾಡುತ್ತಿವೆ.
Advertisement
ಬಯಲು ಸೀಮೆ ಪ್ರದೇಶಗಳಲ್ಲಿ ಸೆರೆ ಹಿಡಿದ ಮಂಗಗಳನ್ನು ಸಹ ಮಲೆನಾಡಿಗೆ ತಂದು ಬಿಡುತ್ತಿರುವುದು ಇಲ್ಲಿನ ರೈತರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಮಂಗಗಳ ಉಪಟಳಕ್ಕೆ ಇತಿಶ್ರೀ ಹಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ದೆಹಲಿ, ಅಸ್ಸಾಂ ರಾಜ್ಯಗಳಲ್ಲಿ ಸ್ಥಾಪಿಸಿರುವ ಮಾದರಿಯಲ್ಲಿ ಮಂಕಿ ಪಾರ್ಕ್ ಸ್ಥಾಪನೆ ಮಾಡಬೇಕು. ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದಾರೆ. ಅರಣ್ಯ ಕಾಯ್ದೆಯಡಿಯಲ್ಲಿ ಈ ಮಂಗಗಳಿಗೆ ಮಕಾಕ ರೆಡಿಯಾಟ್ ಎಂದು ಹೆಸರಿಸಿದರೆ ಈ ಮಂಗಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದ್ದು ಇದಕ್ಕೆ ಕೂಡಲೇ ಸರ್ಕಾರ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮಲೆನಾಡಿನಲ್ಲಿ ಅಡಕೆ ಹಾಗೂ ಇತರ ಪ್ರಮುಖ ಬೆಳೆ ಬೆಳೆಯುವವರಿಗೆ ಮಂಗಗಳ ಹಾವಳಿ ಶಾಪವಾಗಿ ಪರಿಣಮಿಸಿದ್ದು, ಶೇ.30 ರಿಂದ 50ರಷ್ಟು ಬೆಳೆ ನಷ್ಟವಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಲೆನಾಡಿನಲ್ಲಿ ಕಾಣಿಸಿಕೊಂಡಿರುವ ಮಂಗನ ಖಾಯಿಲೆ ತಡೆಗಟ್ಟುವಿಕೆಗೂ ಇದು ಸಹಕಾರಿಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.