ಬೆಂಗಳೂರು: ಮಂಗಗಳ ಪಾರ್ಕ್ ನಿರ್ಮಾಣದಿಂದಾಗಿ ಕೃಷಿ ಬಿಟ್ಟು ಪಟ್ಟಣಗಳಿಗೆ ವಲಸೆ ಬರುತ್ತಿರುವ ಯುವಕರನ್ನು ತಡೆಯಬಹುದಾಗಿದೆ ಎಂದು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿಯ ಪ್ರಾಣಿಗಳ ತೊಂದರೆಯಿಂದ ಯುವ ಸಮೂಹ ಕೃಷಿ ಮಾಡದೇ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಆ ಭಾಗದಲ್ಲಿ ಪ್ರಾಣಿಗಳ ಸಂತತಿ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿ ಸಾಕಷ್ಟು ಹಾನಿ ಮಾಡುತ್ತಿವೆ ಎಂದು ವಿವರಿಸಿದರು. ಇದನ್ನೂ ಓದಿ: ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ
ಬೇಸಾಯದ ಬದುಕನ್ನು ಹಾಳು ಮಾಡುತ್ತಿರುವ ಪ್ರಾಣಿಗಳ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ಮಲೆನಾಡು ಭಾಗದಲ್ಲಿ ಮಂಗನ ಪಾರ್ಕ್ ನಿರ್ಮಿಸಲು ಸಹ ಚರ್ಚಿಸಿದ್ದಾರೆ. ಮೂವರು ಮಂತ್ರಿಗಳು ಹಾಗೂ ಸಿಎಂ ಸೇರಿದಂತೆ ರೈತ ಮುಖಂಡರ ಸಭೆ ನಡೆಸಿದ್ದಾರೆ. ಆದರೆ ಮಂಗನ ವಿಚಾರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಭೆಯೇ ಎಂದು ಕೆಲವರು ಕೇಳಿದ್ದಾರೆ. ರೈತರ ಕಷ್ಟ ಇವರಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.
ಮಂಗಗಳು ಗಿಡಬಳ್ಳಿಗಳನ್ನು ಹಾಳು ಮಾಡುತ್ತಿವೆ. ಮಂಗಗಳ ಹಾವಳಿಯಿಂದ ಏಲಕ್ಕಿ ಹಾಳಾಗುತ್ತಿದೆ. ಪ್ರಾಣಿಗಳ ಹಾವಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡಿರುವುದರಿಂದ ಸಿಎಂ ಸಭೆ ಮಾಡಿದ್ದಾರೆ ಎಂದರು.
ಕಾಡುಕೋಣಗಳಿಂದ ಬೆಳೆ ಹಾಳಾಗದಂತೆ ತಡೆಯಲು ಸರ್ಕಾರವೇ ಸೋಲಾರ್ ಫೆನ್ಸ್ ಮಾಡಿಕೊಡಬೇಕು. ಸೋಲರ್ ಫೆನ್ಸ್ ಗಳಿಂದ ಬೆಳೆ ರಕ್ಷಣೆ ಮಾಡಬಹುದು. ಅಲ್ಲದೆ ಮಂಗಗಳ ಹಾವಳಿ ತಡೆಯಲು ಮಂಕಿ ಪಾರ್ಕ್ ಅಗತ್ಯವಿದೆ. ಈ ಕುರಿತು ಈಗಾಗಲೇ ಮನವಿ ಮಾಡಿದ್ದೇವು. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸಿದ್ದಾರೆ ಎಂದರು.
ಹೊಸನಗರ ತಾಲೂಕಿನ ನಾಗೋಡಿಯಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ 100 ಎಕರೆಗೆ ಸರ್ಕಾರ ಒಪ್ಪಿದೆ. ಮಂಗಗಳನ್ನು ಆ ಪಾರ್ಕಿನಲ್ಲಿ ಹಾಕುವುದರಿಂದ ಅವುಗಳನ್ನು ರಕ್ಷಣೆ ಮಾಡಿದಂತೆ ಆಗುತ್ತದೆ. ಅಲ್ಲದೆ ರೈತರಿಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಬೆಳೆ ನಷ್ಟ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ನಾಗೋಡಿಯಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಹಣವನ್ನು ಸರ್ಕಾರ ನೀಡುತ್ತದೆ. ಇದರ ಬಗ್ಗೆ ವರದಿ ನೀಡಬೇಕಿದೆ ಎಂದರು.