ಗದಗ: ಅದ್ಯಾಕೋ ರೈತರ ಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲಾ ಒಂದು ಸಂಕಷ್ಟದ ಸುಳಿಗೆ ಸಿಲುಕಿ ರೈತ ನಲುಗುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲ. ಮತ್ತೊಂದೆಡೆ ಅಲ್ಪಸ್ವಲ್ಪ ಮಳೆಗೆ ಬೆಳೆದ ಬೆಳೆ ಮಂಗಗಳ ಹಾವಳಿಯಿಂದ ಹಾಳಾಗುತ್ತಿದೆ. ಬರಗಾಲದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆನಾಶದಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗದಗ ತಾಲೂಕಿನ ನಾಗಾವಿ ಹಾಗೂ ಬೆಳದಡಿ ಭಾಗದ ಜಮೀನಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಅಲ್ಪಸ್ವಲ್ಪ ಬೆಳೆದ ಹೆಸರು, ಶೇಂಗಾ ಬೆಳೆಯನ್ನ ಮಂಗಗಳ ಹಿಂಡು ಕಿತ್ತು ತಿಂದು ಹಾಕುವ ಮೂಲಕ ನಾಶ ಮಾಡುತ್ತಿವೆ. ಪ್ರತಿನಿತ್ಯ ರೈತರು ಬೆಳೆಯನ್ನ ಕಾಯಲೇಬೇಕು. ಈ ಭಾಗದಲ್ಲಿ ಅನೇಕ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಬೆಳೆ ಪರಿಹಾರ ಕೇಳಿದರೆ ನೋ ಚಾನ್ಸ್ ಎನ್ನುತ್ತಿದ್ದಾರೆ.
Advertisement
Advertisement
ಮನುಷ್ಯರಂತೆ ವಾನರ ಸೈನ್ಯ ಸಾಲುಸಾಲಾಗಿ ಬಂದು ಬೆಳೆತಿಂದು ಹಾನಿ ಮಾಡುತ್ತಿವೆ. ಸಾಲ ಮಾಡಿ ಬೀಜಗೊಬ್ಬರ ಹಾಕಿ ಬೆಳೆದ ಬೆಳೆ ಕೈತಪ್ಪಿ ಹೊರಟಿದೆ. ಮಂಗಗಳಿಂದ ಹೆಸರು, ಶೇಂಗಾ ಬೆಳೆ ಕಳೆದುಕೊಂಡು ಕಂಗಲಾದ ರೈತರ ಜೀವನ ಈಗ ದುಸ್ತರವಾಗಿದೆ. ರೈತರಿಗೆ ಬೆಳೆ ಹಾನಿ ಕೊಡುವುದಾಗಿ ಸರ್ಕಾರ ಬರೀ ಹೇಳುತ್ತಿದೆ ವಿನಃ ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುವುದು ರೈತರ ಆರೋಪವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಬೆಳೆಹಾನಿ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡದೆ ಇದ್ದರೆ ಸಾಲದಿಂದ ಸಾಯುವುದಂತೂ ಖಚಿತ ಎಂದಿದ್ದಾರೆ.
Advertisement
ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಈ ಮಂಗಗಳ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಮಂಗಗಳಿಗೆ ಪ್ರತ್ಯೇಕ ಅರಣ್ಯ ಮಾಡಬೇಕು. ಇಲ್ಲಾ ಅಂದರೆ ಇವುಗಳನ್ನು ಹಿಡಿದು ಕಾಡು, ಬೆಟ್ಟ, ಗುಡ್ಡಗಳಿಗೆ ಸಾಗಿಸಬೇಕು ಎಂಬುವುದು ರೈತರ ಒತ್ತಾಯವಾಗಿದೆ. ಇನ್ನಾದರೂ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡುತ್ತಾ ಅಥವಾ ಈ ಕೋತಿಗಳನ್ನ ಕಾಡಿಗೆ ಕಳಿಸುವ ಮೂಲಕ ರೈತರ ಕಷ್ಟಗಳನ್ನ ಮುಕ್ತಿಗೊಳಿಸುತ್ತಾ ಎಂದು ಕಾದು ನೋಡಬೇಕಿದೆ.
Advertisement