ಬಾಗಲಕೋಟೆ: ಕಲ್ಯಾಣ ಮಂಟಪವೊಂದಕ್ಕೆ ನಿತ್ಯ ಕೋತಿಯ ಕಿರಿಕಿರಿ ಶುರುವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೈಗೂ ಸಿಗದೆ ಚಮಕ್ ನೀಡುತ್ತಿದೆ.
ಬಾಗಲಕೋಟೆಯ ಎಪಿಎಂಸಿ ಬಳಿಯಿರುವ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಕಳೆದ 15 ದಿನಗಳಿಂದ ಮದುವೆಗಳಿಗೆ ಎಂಟ್ರಿ ಕೊಡುವ ಮೂಲಕ ಕೋತಿ ತಲೆ ನೋವಾಗಿ ಪರಿಣಮಿಸಿದೆ. ಈಗಾಗಲೇ ಕುಚೇಷ್ಟೇ ಮಾಡುತ್ತಿರುವ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಬಲೆ, ಬೋನ್ ಹಿಡಿದು ಹರಸಾಹಸಪಟ್ಟರೂ ಇಂದಿಗೂ ಮಂಗ ಸಿಕ್ಕಿಲ್ಲ.
Advertisement
Advertisement
ಸೋಮವಾರ ನಡೆದ ಮದುವೆ ಸಂಭ್ರಮದಲ್ಲಿ ಕೋತಿ ಎಂಟ್ರಿ ಕೊಟ್ಟಿದೆ. ಅಲ್ಲದೆ ಅತಿಥಿಗಳ ಜೊತೆ ಖುರ್ಚಿ ಮೇಲೆ ಕುಳಿತು ಕೋತಿಯ ಚೇಷ್ಟೆ ಇದೀಗ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಸೋಮವಾರ ನಡೆದ ದಿಶಾ ಹಾಗೂ ದೀನಾನಾಥ ಎಂಬವರ ಮದುವೆ ಸಮಾರಂಭಕ್ಕೆ ಅತಿಥಿಗಳಂತೆ ಬಂದ ಕೋತಿ, ಇಡೀ ದಿನ ಕಲ್ಯಾಣ ಮಂಟಪ ಬಿಟ್ಟು ಹೊರಗೆ ಹೋಗಿಲ್ಲ.
Advertisement
ಈ ವೇಳೆ ಕೋತಿ ಬಂದ ಹಿನ್ನೆಲೆ ಕೆಲವರು ಗಾಬರಿ ಆದರೆ, ಕೆಲವರಿಗೆ ಇದು ಮಜಾ ಎನಿಸಿತ್ತು. ಗಾಬರಿಯಿಂದಲೇ ಕಲ್ಯಾಣ ಮಂಟಪದ ಬಾಗಿಲು ಹಾಕಿಕೊಂಡರೂ ಕಿಟಕಿ ಬಳಿ ಕುಳಿತ ಕೋತಿ ಮದುವೆ ವೀಕ್ಷಣೆ ಮಾಡಿದೆ. ಇನ್ನು ಕೋತಿ ಪ್ರವೇಶ ಶುಭ ಸಂಕೇತ, ಮಾರುತಿ ದೇವರು ಮದುವೆಗೆ ಬಂದ ಹಾಗೆ ಎಂದು ಕುಟುಂಬಸ್ಥರು ಮಾತನಾಡಿಕೊಂಡಿದ್ದಾರೆ.