ಶಿವಮೊಗ್ಗ: ಮಲೆನಾಡಿಗರನ್ನು ಮಂಗನ ಕಾಯಿಲೆ ಬಿಟ್ಟು ಬಿಡದೇ ಕಾಡುತ್ತಿದೆ. 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಈ ಮಂಗನ ಕಾಯಿಲೆ ಕಂಡುಬಂದಿತ್ತು. ಈಗಾಗಿಯೇ ಈ ರೋಗಕ್ಕೆ ‘ಕ್ಯಾಸನೂರು ಡಿಸೀಸ್ ಫಾರೆಸ್ಟ್'(ಕೆಎಫ್‍ಡಿ) ಅಂತಾ ಕರೆಯುತ್ತಾರೆ. ಕೆಎಫ್‍ಡಿ ರೋಗಕ್ಕೆ ಇದುವರೆಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಒಂದೇ ಗ್ರಾಮದಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದೀಗ ಮೇ 3 ರಂದು ಮಂಗನ ಕಾಯಿಲೆಗೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಮೃತಪಟ್ಟಿರುವುದು ಇದೀಗ ಮತ್ತೆ ಆತಂಕ ಉಂಟು ಮಾಡಿದೆ.
23 ಮಂದಿ ಬಲಿ
ಶಿವಮೊಗ್ಗ ಜಿಲ್ಲೆಯ ಬಹುತೇಕ ಪ್ರದೇಶ ಮಲೆನಾಡಿನಿಂದ ಕೂಡಿದೆ. ಮಲೆನಾಡಿನ ಭಾಗದಲ್ಲಿಯೇ ಅತಿ ಹೆಚ್ಚು ಕಾಣಿಸಿಕೊಳ್ಳುವ ರೋಗ ಅಂದರೆ ಮಂಗನ ಕಾಯಿಲೆ. ಈ ಕಾಯಿಲೆ ಮಂಗಗಳಿಂದಲೇ ಹರಡುತ್ತದೆ ಎಂಬ ಕಾರಣದಿಂದಲೇ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಕಳೆದ ಎರಡು ವರ್ಷದ ಹಿಂದೆ ಒಂದೇ ಗ್ರಾಮದಲ್ಲಿ ಮಂಗನ ಕಾಯಿಲೆಗೆ 23 ಮಂದಿ ಬಲಿಯಾಗಿದ್ದರು.
ಕಳೆದ ವರ್ಷ ಈ ಕಾಯಿಲೆ ಅಷ್ಟಾಗಿ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಮತ್ತೆ ಅರಳಗೋಡು ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ರಾಮಸ್ವಾಮಿ(55) ಮಂಗನ ಕಾಯಿಲೆಗೆ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖ
ಮಂಗಗಳು ಸತ್ತ ನಂತರ, ಮೃತ ಮಂಗಗಳ ದೇಹದಿಂದ ಉಣುಗುಗಳು ಹೊರ ಬರುತ್ತವೆ. ಹೀಗೆ ಹೊರ ಬಂದ ಉಣುಗುಗಳು ಬೇರೆ ಜೀವಿಗಳ ದೇಹ ಸೇರಿಕೊಂಡು ಬದುಕುತ್ತವೆ. ಈ ಉಣುಗುಗಳು ಕಾಡಿಗೆ ಹೋಗುವ ಜಾನುವಾರುಗಳು ಹಾಗು ಮನುಷ್ಯರ ದೇಹವನ್ನು ಸೇರಿಕೊಳ್ಳುತ್ತವೆ. ಮನುಷ್ಯನಲ್ಲಿ ಉಣುಗುಗಳು ಸೇರಿಕೊಂಡಾಗ ನಿಧಾನವಾಗಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಆದರೆ ನಿರ್ಲಕ್ಷಿಸಿದರೇ ಸಾವು ಕಟ್ಟಿಟ್ಟ ಬುತ್ತಿ.
6-7 ದಶಕ ಸಮೀಪಿಸಿದೆ
ಈ ಮಂಗನ ಕಾಯಿಲೆಗೆ ಇದುವರೆಗೆ ಯಾವುದೇ ಲಸಿಕೆ ಇಲ್ಲ. ಕೇವಲ ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇ ಇದಕ್ಕೆ ಸೂಕ್ತ ಮದ್ದು. ಈ ಕಾಯಿಲೆ ಪತ್ತೆಯಾಗಿ 6-7 ದಶಕಗಳೇ ಸಮೀಸುತ್ತಿದ್ದರೂ ಇದುವರೆಗೂ ಯಾವುದೇ ಸರ್ಕಾರಗಳು ಆಗಲಿ, ವಿಜ್ಞಾನಿಗಳಾಗಲಿ ಇದಕ್ಕೆ ಲಸಿಕೆ ಕಂಡುಹಿಡಿಯಲು ಮುಂದಾಗಿಲ್ಲ. ಈ ರೋಗ ಸಾಮಾನ್ಯವಾಗಿ ಜನವರಿಯಿಂದ ಜೂನ್‍ವರೆಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಬಚಾವ್ ಆಗಬಹುದು.
ಮಲೆನಾಡಿನ ಭಾಗಗಳಾದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಈ ರೋಗ ಹೆಚ್ಚು ಕಾಡುತ್ತಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿಲ್ಲ. ಈ ಭಾಗದಲ್ಲಿ ವಿಶೇಷವಾದ ಆಸ್ಪತ್ರೆ ಆರಂಭಿಸಲು, ಪ್ರಯೋಗಾಲಯ ಸ್ಥಾಪಿಸಲು ಮುಂದಾಗುತ್ತಿಲ್ಲ. ಜನರ ಜೀವದ ಜೊತೆ ಚೆಲ್ಲಾಟ ಆಡುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ವಿಚಾರಿಸಿದರೆ, ಕೆಎಫ್‍ಡಿ ರೋಗಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೂಸ್ಟರ್ ಡೋಸ್ ಲಸಿಕೆ ಹಾಕಲಾಗಿದೆ. ಆದರೆ ರಾಮಸ್ವಾಮಿ ಅವರಿಗೆ ಡಯಾಬಿಟಿಸ್ ರೋಗ ಇತ್ತು, ಈಗಾಗಿಯೇ ಅವರು ಮೃತಪಟ್ಟಿದ್ದಾರೆ ಹೊರತು ಕೇವಲ ಮಂಗನ ಕಾಯಿಲೆಯಿಂದಲ್ಲ ಎಂದು ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳುತ್ತಾರೆ.
ಒಟ್ಟಿನಲ್ಲಿ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ರೋಗ ಮತ್ತಷ್ಟು ಉಲ್ಬಣಗೊಂಡು, ಹಲವರ ಸಾವು-ನೋವು ಸಂಭವಿಸುವ ಮೊದಲು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.