– ಯಾರಿಗೂ ಹೆದರಲ್ಲ, ಯಾರನ್ನೂ ಹೆದರಿಸಲ್ಲ
– ಸ್ನೇಹಿತರಂತೆ ಮಾನವರೊಂದಿಗೆ ಕೋತಿಯ ವಾಸ
ಚಿಕ್ಕಮಗಳೂರು: ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕೋತಿಯೊಂದು ನಗರ ಪ್ರದೇಶಕ್ಕೆ ಬಂದು ರಾಜರೋಷವಾಗಿ ಓಡಾಡುತ್ತಾ, ಯಾರಿಗೂ ಹೆದರದೆ-ಹೆದರಿಸದೆ ಎಲ್ಲರಲ್ಲೂ ಒಂದಾಗಿದೆ.
ತರೀಕೆಯ ಬಿ.ಎಚ್.ರಸ್ತೆಯಲ್ಲಿರುವ ಕಟಿಂಗ್ ಶಾಪ್ ರಾಯಲ್ ಹೇರ್ ಡ್ರೆಸಸ್‍ಗೆ ಭೇಟಿ ನೀಡಿದ ಮಂಗ ಕತ್ತರಿ ಹಾಗೂ ಬಾಚಣಿಕೆ ಹಿಡಿದು ಆಟವಾಡಿದೆ. ಮಂಗನನ್ನು ಹೊರಗಟ್ಟಲು ಮಾಲೀಕ ಏನೇ ಹರಸಾಹಸ ಮಾಡಿದರೂ ಅದು ಮಾತ್ರ ಜಪ್ಪಯ್ಯ ಅಂದಿಲ್ಲ. ಮಾಲೀಕ ಮಂಗನ ಕಾಟದಿಂದ ಬೇಸತ್ತು ಅಂಗಡಿಯ ಲೈಟ್ ಆಫ್ ಮಾಡಿದ್ದಾನೆ. ನಂತರ ಮಂಗ ಹೊರಬಂದು ಕುಡಿಯುವ ನೀರಿಗಾಗಿ ಪರದಾಡಿದೆ. ಪಕ್ಕದಲ್ಲೇ ಇದ್ದ ಮಾರುತಿ ಮೆಡಿಕಲ್ಸ್‍ನಲ್ಲಿ ಬಿಸ್ಲರಿ ನೀರು ಕುಡಿಯಲು ಯತ್ನಿಸಿದೆ.
ನೀರಿಗಾಗಿ ಮಂಗನ ಹೋರಾಟ ಕಂಡು ಮೆಡಿಕಲ್ ಶಾಪ್‍ನಲ್ಲಿದ್ದ ಮಾಲೀಕರೇ ಹೊಸ ಬಾಟಲಿಯ ಮುಚ್ಚಳ ತೆಗೆದು ನೀರು ಕುಡಿಸಿದ್ದಾರೆ. ನೀರು ಕುಡಿದು ನಿಧಾನವಾಗಿ ಜಾಗ ಖಾಲಿ ಮಾಡಿ, ಪಕ್ಕದಲ್ಲೇ ಇದ್ದ ಬಾರ್‍ನಲ್ಲಿ ಸಮಯ ಕಳೆದಿದೆ.
ಮಂಗನ ಚೇಷ್ಟೆಯಿಂದ ನಗರ ವಾಸಿಗಳು ಬೇಸತ್ತಿದ್ದು, ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಮಂಗನನ್ನು ಹಿಡಿಯಲು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಯನ್ನೇ ಮಂಗ ಕಾಡಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಕಾಡಿಸಿ ಸಿಬ್ಬಂದಿಯೇ ಸುಸ್ತಾಗಿ ನೀರು ಕುಡಿಯುವಂತೆ ಮಾಡಿ ಬಳಿಕ ಮಾಯವಾಗಿದೆ. ವಿಶೇಷವೆಂದರೆ ನಾನು ಯಾರಿಗೂ ತೊಂದರೆ ಮಾಡಲ್ಲ, ಮನುಷ್ಯರ ಜೊತೆ ಪಳಗಿದ್ದೇನೆಂಬ ರೀತಿಯಲ್ಲಿ ಮಂಗ ವರ್ತಿಸಿದ್ದು, ನೋಡುಗರ ಮನಗೆದ್ದಿದೆ.