ನವದೆಹಲಿ: ಜೀವನಕ್ಕೆ ಬಹುಮುಖ್ಯವಾಗಿರುವ ನೀರನ್ನು ಉಳಿಸಿ ಎಂದು ಪ್ರತಿನಿತ್ಯ ನೂರಾರು ಜನ ಭಾಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ ನೀರಿನ ಮಹತ್ವ ಅರಿತು ಅದನ್ನು ಮಿತವಾಗಿ ಬಳಸುವ ಮಂದಿ ಕಡಿಮೆ. ಹೀಗಿರುವಾಗ ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿಯೊಂದು ನೀರನ್ನು ಪೋಲು ಮಾಡದೆ, ಬುದ್ಧಿವಂತಿಕೆಯಿಂದ ನೀರು ಕುಡಿದ ಬಳಿಕ ನಲ್ಲಿ ಆಪ್ ಮಾಡಿ ಎಲ್ಲರಿಗೂ ಮಾದರಿಯಾಗಿದೆ.
ಪ್ರಸ್ತುತವಾಗಿ ದೇಶದ ಹಲವೆಡೆ ನೀರಿಗಾಗಿ ಜನ ಬಡಿದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ನೀರನ್ನು ಪೋಲು ಮಾಡಿ, ಅದರ ಬಗ್ಗೆ ಕ್ಯಾರೇ ಅನ್ನದ ಮಂದಿ ಕೂಡ ಇದ್ದಾರೆ. ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ ಜೀವಿ ಎಂದರೆ ಮನುಷ್ಯ. ಆದರೆ ಇತ್ತೀಚಿಗೆ ಮಾನವನ ಅತಿಯಾಸೆಗೆ ಪರಿಸರ ನಾಶವಾಗುತ್ತಿದೆ. ಹಿಂದೆ ಹೇರಳವಾಗಿ ದೊರೆಯುತ್ತಿದ್ದ ನೀರು ಈಗ ಮರೆಯಾಗುತ್ತಿದೆ. ಮನುಷ್ಯನಿಗಿಂತ ಪ್ರಾಣಿಗಳೇ ನೀರಿನ ಮಹತ್ವವನ್ನು ಚೆನ್ನಾಗಿ ಅರಿತಿರುತ್ತದೆ. ಅದಕ್ಕೆ ಉದಾಹರಣೆ ಎನ್ನುವಂತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೋತಿಯೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
What a beautiful message for humans! pic.twitter.com/wTgK4b9uGF
— Dr. S.Y. Quraishi (@DrSYQuraishi) August 1, 2019
ಈ ವಿಡಿಯೋವನ್ನು ಮೊದಲು ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ನಂತರ ವಿಡಿಯೋ ನೋಡಿ ಮೆಚ್ಚಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್.ವೈ ಖುರೇಷಿ ಅವರು ಟ್ವೀಟ್ ಮಾಡಿದ್ದಾರೆ. ಮಾನವರಿಗೆ ಎಂತಹ ಅದ್ಭುತ ಸಂದೇಶವೆಂದು ಬರೆದು, ವಿಡಿಯೋ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಂಟಾಟ ಮಾಡಿಕೊಂಡು ಕಾಟ ಕೊಡುವ ಕೋತಿಗಳು ಕೂಡ ನೀರಿನ ಬಳಕೆ ಬಗ್ಗೆ ಅರಿತಿದೆ. ಆದರೆ ಮಾನವ ದುರಹಂಕಾರದಿಂದ ನೀರನ್ನು ಪೋಲು ಮಾಡುತ್ತಾನೆ. ಮನುಷ್ಯರು ಪ್ರಾಣಿಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಗುರುವಾರದಂದು ಈ ವಿಡಿಯೋವನ್ನು ಖುರೇಷಿ ಅವರು ಟ್ವೀಟ್ ಮಾಡಿದ್ದಾರೆ. ಈವರೆಗೆ ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ.