ಗದಗ: ದಾರಿತಪ್ಪಿ ಬಂದ ಕೋತಿಯೊಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಹೊತ್ತು ಆತಂಕ ಸೃಷ್ಟಿಮಾಡಿರುವ ಘಟನೆ ನಡೆದಿದೆ.
ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಕಚೇರಿಯ ಆಡಳಿತ ವಿಭಾಗ, ಸಿಇಒ ಕೊಠಡಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಗೆ ಕೋತಿ ನುಗ್ಗಿದೆ. ಮಂಗವನ್ನು ನೋಡುತ್ತಲೇ ಕೆಲ ಸಿಬ್ಬಂದಿ ಕಚೇರಿಯಿಂದ ಹೊರ ಓಡಿಹೋಗಿದ್ದಾರೆ. ಇನ್ನು ಕೆಲವರು ಮಂಗವನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ.
ಸಿಬ್ಬಂದಿ ಎಷ್ಟು ಪ್ರಯತ್ನ ಮಾಡಿದರೂ ಕೋತಿ ಮಾತ್ರ ಜನರನ್ನೇ ಆಟ ಆಡಿಸಿತು. ಸಿಇಒ ಕೊಠಡಿಯತ್ತ ಕೋತಿ ತೆರಳುತ್ತಿದ್ದಂತೆ, ಅದನ್ನು ಓಡಿಸಲು ಓಡೋಡಿ ಬಂದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗಿದೆ. ನಂತರ ಕೋತಿಯ ತುಂಟಾಟ, ಪುಂಡಾಟಕ್ಕೆ ಸಾಕಾಗಿ ಕೊನೆಗೆ ಕೋಲು ತಂದು ಹೊರಹಾಕುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈ ರೀತಿ ಕೋತಿಗಳ ಹಾವಳಿ ಇದೇ ಮೊದಲಲ್ಲ. ಆಗಾಗ ಈ ರೀತಿಯ ಘಟನೆಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಕೋತಿಗಳ ದೊಡ್ಡ ಗುಂಪು ಜಿಲ್ಲಾಡಳಿತ ಭವನದ ಆಸುಪಾಸು ಇರುದರಿಂದ ಅವುಗಳ ಕಾಟ ಸಿಬ್ಬಂದಿಗೆ ತಲೆನೋವಾಗಿದೆ. ಇಲ್ಲಿಗೆ ಬರುವ ಜನರಿಗೂ ಆಗಾಗ ಕಾಟ ಕೊಡುತ್ತವೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೋತಿಗಳ ಹಾವಳಿಯನ್ನು ತಡೆಯಬೇಕು ಎಂಬವುದು ಸ್ಥಳೀಯರ ಆಗ್ರಹಿಸಿದ್ದಾರೆ.