ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಕೇಸ್ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ವಿಶೇಷ ಕೋರ್ಟ್ ಸೆ.13ರವರೆಗೆ ಜಾರಿ ನಿರ್ದೇಶನಾಲಯ(ಇಡಿ) ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ.
ಮಂಗಳವಾರ ರಾತ್ರಿ 8.20ಕ್ಕೆ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು ರಾಮ್ ಲೋಹಿಯಾ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಬಿಪಿ ಹಾಗೂ ಶುಗರ್ ನಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಅವರನ್ನು ನಿನ್ನೆಯಿಂದಲೇ ವಿವಿಧ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಇಂದು ಮಧ್ಯಾಹ್ನ 3.20ರ ವೇಳೆಗೆ ಡಿಕೆ ಶಿವಕುಮಾರ್ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಹಾಜರು ಪಡಿಸಿದರು. ಕೋರ್ಟ್ ವಿಚಾರಣೆ ಮಧ್ಯಾಹ್ನ 3:40ರಿಂದ ಆರಂಭಗೊಂಡಿತು.
Advertisement
ಡಿಕೆ ಶಿವಕುಮಾರ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಧ್ಯಾನ್ ಕೃಷ್ಣನ್ ವಾದ ಮಂಡಿಸಿದರೆ, ಇಡಿ ಪರವಾಗಿ ಎಎಸ್‍ಜಿ ಕೆಎಂ ನಟರಾಜ್ ವಾದಿಸಿದರು. ಸುಮಾರು 2 ಗಂಟೆಗಳ ಕಾಲ ವಾದ, ಪ್ರತಿವಾದ ಆಲಿಸಿದ ನ್ಯಾ. ಅಜಯ್ ಕುಮಾರ್ ಕುಹಾರ್ ಸಂಜೆ 5.42ರ ವೇಳಗೆ 15 ನಿಮಿಷ ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಇದಾದ ಬಳಿಕ ಸಂಜೆ 7.11 ರ ವೇಳೆಗೆ ಆದೇಶ ಪ್ರಕಟಿಸಿದರು.
Advertisement
ಡಿಕೆಶಿ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು, ಪ್ರತಿ ದಿನ ಅರ್ಧಗಂಟೆ ಕುಟುಂಬದ ಸದಸ್ಯರನ್ನು ಭೇಟಿ ಆಗಬಹುದು. ಅನಾರೋಗ್ಯದ ಹಿನ್ನೆಲೆಯಲ್ಲಿ ಕುಣಿಗಲ್ ಶಾಸಕರಾಗಿರುವ ರಂಗನಾಥ್ ಅವರನ್ನು ಪರ್ಸನಲ್ ವೈದ್ಯರನ್ನಾಗಿ ಹೊಂದಲು ಅನುಮತಿ ನೀಡಿದರು. ಇದರ ಜೊತೆ ವಕೀಲರನ್ನು ಭೇಟಿಯಾಗಬಹುದು ಎಂದು ಸೂಚಿಸಿದರು. ಡಿಕೆಶಿಯ ಜಾಮೀನು ಅರ್ಜಿ ವಿಚಾರಣೆ ಸೆ.13 ರಂದು ಕೋರ್ಟ್ ಮುಂದೆ ಬರಲಿದೆ.
Advertisement
Advertisement
ಆರಂಭದಲ್ಲಿ ಎಎಸ್‍ಜಿ ಕೆ.ಎಂ ನಟರಾಜ್ ವಾದ ಆರಂಭಿಸಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಆರೋಪಿಯನ್ನು 14 ದಿನ ಇಡಿ ವಶಕ್ಕೆ ನೀಡಬೇಕು. ಐಟಿ ತನಿಖೆ ಮತ್ತು ಹಲವು ಸಾಕ್ಷಿಗಳ ಹೇಳಿಕೆಗಳು ಡಿಕೆ ಶಿವಕುಮಾರ್ ವಿರುದ್ಧ ಇವೆ. ಸಮನ್ಸ್ ಜಾರಿಯಾದ ಮೇಲೆ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ವಿಚಾರಣೆಗೆ ಸಹಕರಿಸುತ್ತಿಲ್ಲ. ತನಿಖೆ ಮಹತ್ವದ ಹಂತದಲ್ಲಿದೆ. ಡಿಕೆಶಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಕೆಲ ವಿಚಾರಗಳು ಡಿಕೆಶಿಗಷ್ಟೇ ಗೊತ್ತು. ಆದರೆ ಡಿಕೆಶಿ ತನಿಖೆಯ ಹಾದಿ ತಪ್ಪಿಸ್ತಿದ್ದಾರೆ. ಹಣದ ಮೂಲವನ್ನು ಬಾಯ್ಬಿಡಿಸಬೇಕಿದೆ. ಹೀಗಾಗಿ 14 ದಿನ ಇಡಿ ಕಸ್ಟಡಿಗೆ ನೀಡಬೇಕು ಎಂದು ವಾದ ಮಂಡಿಸಿದರು.
ಈ ವಾದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ಡಿಕೆಶಿಯನ್ನು ವಿಚಾರಣೆಗೆ ಒಳಪಡಿಸಿದ್ದು ಮೂವರು ಅಧಿಕಾರಿಗಳು. ಆದ್ರೆ ಸಹಿ ಮಾಡಿರುವುದು ಒಬ್ಬರೇ. ಇದನ್ನು ಗಮನಿಸಬೇಕು. ಈಗಾಗಲೇ ಡಿಕೆಶಿಯನ್ನು 33ರಿಂದ 34 ಗಂಟೆ ಕಾಲ ಇ.ಡಿ ವಿಚಾರಣೆಗೆ ಒಳಪಡಿಸಿದೆ. ನಮ್ಮ ಕಕ್ಷಿದಾರ ಎಲ್ಲೂ ಪರಾರಿಯಾಗಿಲ್ಲ. ಕರೆದಾಗಲೆಲ್ಲಾ ಬಂದಿದ್ದಾರೆ. ಹೀಗಾಗಿ ಇಡಿ ವಶಕ್ಕೆ ನೀಡುವ ಅಗತ್ಯವಿಲ್ಲ. ಇಡಿ ಪರ ವಕೀಲರು, ಹೊಸದೇನನ್ನೂ ತೋರಿಸುತ್ತಿಲ್ಲ. ಎಲ್ಲ ಹಳೆಯದನ್ನೇ ತೋರಿಸುತ್ತಿದ್ದಾರೆ. ಹೀಗಾಗಿ ಇಡಿ ವಾದದಲ್ಲಿ ಹುರುಳಿಲ್ಲ. ಡಿಕೆಶಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇಡಿ ಪ್ರಕರಣ ನಿಂತಿರುವುದು 2017ರ ಆಗಸ್ಟ್ ನಲ್ಲಿ ಐಟಿ ನಡೆಸಿದ ದಾಳಿಯ ಮೇಲೆ. ಇಡಿ ಪ್ರಕರಣ ದಾಖಲಾಗಿದ್ದು ಜೂನ್ 2018ರಲ್ಲಿ. ಇಷ್ಟು ತಡವಾಗಿ ಪ್ರಕರಣ ದಾಖಲಾಗಿದ್ದು ಯಾಕೆ? ಐಟಿ ತನಿಖೆಗೆ ಆಗಸ್ಟ್ 20ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸೆಪ್ಟೆಂಬರ್ ಏಳರವರೆಗೂ ಇದು ಅನ್ವಯ ಆಗುತ್ತದೆ. ಡಿಕೆಶಿ ವಿರುದ್ಧದ ಆರೋಪಗಳು ಐಟಿ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧವಲ್ಲ. ಐಟಿ ಅಡಿ ದಾಖಲಾದ ಪ್ರಕರಣಕ್ಕೆ ಪಿಎಂಎಲ್‍ಎ ಕಾಯ್ದೆ ಅನ್ವಯವಾಗುವುದಿಲ್ಲ. ಘನ ನ್ಯಾಯಾಲಯ ವಿವೇಚನೆ ಬಳಸಿ ಆದೇಶ ನೀಡಬೇಕು. ಸತ್ಯ ಹೇಳುತ್ತಿಲ್ಲ ಎಂದು ಬಂಧಿಸುವುದು ಎಷ್ಟು ಸರಿ? ಅವರ ಪ್ರಕಾರ ಸತ್ಯ ಎಂದರೆ ಏನು? ಅವರು ಬಯಸಿದ್ದನ್ನು ಹೇಳದಿರುವುದೇ? ನಮ್ಮ ಕಕ್ಷಿದಾರ ಹೇಳುವುದು ಸತ್ಯ ಎಂದು ಏಕೆ ಭಾವಿಸಬಾರದು ಎಂದು ಪ್ರಶ್ನಿಸಿದರು.
ಡಿಕೆಶಿಯನ್ನು ಕಸ್ಟಡಿಗೆ ತೆಗೆದುಕೊಂಡು ಬಲವಂತವಾಗಿ ಹೇಳಿಕೆ ಕೊಡಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಡಿಕೆಶಿಯನ್ನು ಕಸ್ಟಡಿಗೆ ನೀಡಬಾರದು. ಕಕ್ಷಿದಾರರ ಆರೋಗ್ಯ ಕೂಡ ಸರಿಯಿಲ್ಲ. ಥೈರಾಯ್ಡ್, ಲೋ ಬಿಪಿ, ಹೈ ಶುಗರ್ ಇದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು. ದೆಹಲಿಯಲ್ಲಿ ಡಿಕೆಶಿಗೆ ನಾಲ್ಕು ಮನೆಯಿಲ್ಲ. ಒಂದೇ ಮನೆ ಇದೆ. ಇದನ್ನು ಈಗಾಗಲೇ ಘೋಷಿಸಿಕೊಂಡಿದ್ದಾರೆ. 41 ಲಕ್ಷ ಸಿಕ್ಕಿದ್ದನ್ನು ಘೋಷಿಸಿಕೊಂಡಿದ್ದಾರೆ. ಸರ್ಕಾರಿ ಸಿಬ್ಬಂದಿಯ ಮನೆ ಯಾರಿಗೋ ಸೇರಿದ್ದು. ಅದಕ್ಕೂ ಡಿಕೆಶಿಗೂ ಸಂಬಂಧವಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಸಿಂಘ್ವಿ ವಾದಕ್ಕೆ ಆಕ್ಷಪ ವ್ಯಕ್ತಪಡಿಸಿದ ಕೆ.ಎಂ ನಟರಾಜ್, ಕೋರ್ಟ್ ಮುಂದೆ ಸಹಿ ಮಾಡಿದ ಮಾತ್ರಕ್ಕೆ ನಮ್ಮ ಅರ್ಜಿ ವಜಾ ಮಾಡಬೇಡಿ. 14 ದಿನ ಇಡಿ ಕಸ್ಟಡಿಗೆ ಕೊಡಿ. ಕರ್ನಾಟಕ ಹೈಕೋರ್ಟ್ ಬೆಳವಣಿಗೆಗಳನ್ನು ಇಲ್ಲಿ ಹೇಳಲಾಗುತ್ತಿದೆ. ಈಗಾಗಲೇ ಸಮನ್ಸ್ ರದ್ದು ಅರ್ಜಿಯನ್ನು ವಜಾ ಮಾಡಲಾಗಿದೆ. ವಿಚಾರಣೆ ಅಪೂರ್ಣವಾಗಿದೆ. ಹೀಗಾಗಿ ಮತ್ತಷ್ಟು ವಿಚಾರಣೆ ನಡೆಸಬೇಕಿದೆ. ಇಡಿ ಕಸ್ಟಡಿಗೆ ಕೊಡಿ. ಪಿಎಂಎಲ್‍ಎ ಕಾಯ್ದೆ ಪ್ರಕಾರ ಅಕ್ರಮ ಹಣ ಪತ್ತೆ ಪ್ರಕರಣ ಸ್ವತಂತ್ರ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಬೇಕು. ತನಿಖೆಯ ದೃಷ್ಟಿಯಿಂದ ಎಲ್ಲವನ್ನೂ ಈಗಲೇ ಕೋರ್ಟ್ ಮುಂದೆ ಹೇಳಲು ಆಗುವುದಿಲ್ಲ. ಇನ್ನೂ ತನಿಖೆ ಮುಗಿದಿಲ್ಲ. ಹೀಗಾಗಿ ಕಸ್ಟಡಿಗೆ ನೀಡಬೇಕೆಂದು ಬಲವಾಗಿ ವಾದಿಸಿದರು.
ಈ ವೇಳೆ ಸಿಂಘ್ವಿ ಮಧ್ಯಪ್ರವೇಶಿ ಸಿಂಘ್ವಿ, ಇಡಿ ಎಲ್ಲಾ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ತಿದೆ. ನಮ್ಮ ಮನವಿಯನ್ನು ಕೇಳುತ್ತಿಲ್ಲ. ಇ.ಡಿ ಪೂರ್ವಾಗ್ರಹಪೀಡಿತವಾಗಿದೆ. ಕಸ್ಟಡಿಗೆ ಒತ್ತಡ ಹಾಕುತ್ತಿದೆ. ಇ.ಡಿ ಹೇಳುತ್ತಿದೆ ತನಿಖೆ ಸ್ವತಂತ್ರ್ಯವಾಗಿರಬೇಕು ಅಂತಾ. ಆದರೆ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆಯೇ ಎಂದು ಪ್ರಶ್ನಿಸಿದರು. ಎರಡು ಕಡೆಯ ವಾದ, ಪ್ರತಿವಾದ ಆಲಿಸಿದ ಕೋರ್ಟ್ ಡಿಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಿತು.
ಆ.2ರಿಂದ ಆ.5ರವರೆಗೆ ಬೆಂಗಳೂರು, ದೆಹಲಿ, ಕನಕಪುರ, ರಾಮನಗರ, ಮೈಸೂರು, ಹಾಸನ ಸೇರಿ ಒಟ್ಟು 67 ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು. ಡಿ ಕೆ ಶಿವಕುಮಾರ್, ಕುಟುಂಬ ಸದಸ್ಯರು, ಕನಕಪುರದಲ್ಲಿರುವ ತಾಯಿ ಗೌರಮ್ಮ ಮನೆ, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕಚೇರಿಗಳು, ವ್ಯವಹಾರ ಪಾಲುದಾರರಾದ, ಶರ್ಮಾ ಟ್ರಾವೆಲ್ಸ್, ದ್ವಾರಕನಾಥ ಗುರೂಜಿ, ಆಪ್ತರಾದ ಸಚಿನ್ ನಾಯಕ್, ವಿಧಾನಪರಿಷತ್ ಸದಸ್ಯ ರವಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.
ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.