Connect with us

Bengaluru City

ಡಿಕೆಶಿ ಆಸ್ತಿ ಎಷ್ಟಿದೆ? 8.59 ಕೋಟಿ ಹಣ ಯಾರದ್ದು? ದಾಳಿ ನಡೆಯದೇ ಇದ್ರೂ ಇಡಿ ಎಂಟ್ರಿಯಾಗಿದ್ದು ಹೇಗೆ?

Published

on

ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇಡಿ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು ಕೊನೆಗೂ ಅರೆಸ್ಟ್ ಆಗಿದ್ದಾರೆ. ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಡಿಕೆಶಿಗೆ ಕಳೆದ ಎರಡು ವರ್ಷಗಳಿಂದ ತಲೆನೋವಿಗೆ ಕಾರಣವಾಗಿದ್ದು ದೆಹಲಿಯಲ್ಲಿ ಪತ್ತೆಯಾದ 8.59 ಕೋಟಿ ರೂ.

ಹೌದು. 2017ರ ಆಗಸ್ಟ್ ವರೆಗೆ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‍ನ್ ಪ್ರಕರಣ ಬಿಟ್ಟರೆ ಬೇರೆ ಯಾವುದೇ ದೊಡ್ಡ ಮಟ್ಟದ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಆಗಸ್ಟ್ ನಲ್ಲಿ ಆದಾಯ ತೆರಿಗೆ ಇಲಾಖೆಯವರು ಡಿಕೆಶಿ, ಡಿಕೆಶಿ ಆಪ್ತರು, ಕಂಪನಿಗಳ ಮೇಲೆ ದಾಳಿ ನಡೆಸಿದ ಬಳಿಕ ಐಟಿ, ಇಡಿಯ ಬಲೆಗೆ ಬಿದ್ದರು. ಆದರಲ್ಲೂ ದಾಖಲೆ ಇಲ್ಲದ 8.59 ಕೋಟಿ ಹಣ ಬೆಂಬಿಡದೇ ಕಾಡುತ್ತಿದ್ದು, ಯಾರಿಂದಲೂ ಈ ಹಣದ ಮೂಲದ ಬಗ್ಗೆ ಸರಿಯಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಇಡಿ ಡಿಕೆಶಿಯನ್ನು ಬಂಧಿಸಿ ಮೂಲವನ್ನು ಬೇಧಿಸಲು ಮುಂದಾಗಿದೆ.

ದಾಳಿ ಎಲ್ಲೆಲ್ಲಿ ಆಗಿತ್ತು?
ಆ.2ರಿಂದ ಆ.5ರವರೆಗೆ ಬೆಂಗಳೂರು, ದೆಹಲಿ, ಕನಕಪುರ, ರಾಮನಗರ, ಮೈಸೂರು, ಹಾಸನ ಸೇರಿ ಒಟ್ಟು 67 ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು. ಡಿ ಕೆ ಶಿವಕುಮಾರ್, ಕುಟುಂಬ ಸದಸ್ಯರು, ಕನಕಪುರದಲ್ಲಿರುವ ತಾಯಿ ಗೌರಮ್ಮ ಮನೆ, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕಚೇರಿಗಳು, ವ್ಯವಹಾರ ಪಾಲುದಾರರಾದ ಶರ್ಮಾ ಟ್ರಾವೆಲ್ಸ್, ದ್ವಾರಕನಾಥ ಗುರೂಜಿ, ಆಪ್ತರಾದ ಸಚಿನ್ ನಾಯಕ್, ವಿಧಾನಪರಿಷತ್ ಸದಸ್ಯ ರವಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

8.59 ಕೋಟಿ ಯಾರದ್ದು?
ಶಿವಕುಮಾರ್ ಮತ್ತು ಅವರ ಆಪ್ತರಿಗೆ ಸೇರಿದ ದೆಹಲಿಯ ಆರ್.ಕೆ. ಪುರಂನ ಮನೆ ಹಾಗೂ ಸಫ್ದರ್‍ಜಂಗ್ ಎನ್‍ಕ್ಲೇವ್ ಫ್ಲ್ಯಾಟ್‍ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ.2 ರಂದು ದಾಳಿ ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 8.59 ಕೋಟಿ ಹಣ ಪತ್ತೆಯಾಗಿತ್ತು. ಶಿವಕುಮಾರ್ ಅವರ ವ್ಯವಹಾರಗಳ ಪಾಲುದಾರರಾಗಿರುವ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಸುಖದೇವ್ ವಿಹಾರಿನ ನಿವಾಸಿ ರಾಜೇಂದ್ರ ಅವರು ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದರು. ಸಿಕ್ಕಿದ ಹಣ ಡಿಕೆಶಿಗೆ ಸೇರಿದ್ದು ಎಂದು ಅವರ ಆಪ್ತ ಆಂಜನೇಯ ಹೇಳಿಕೆ ನೀಡಿದ್ದರೆ ಈ ಹಣ ನನ್ನದು ಎಬುದಾಗಿ ಶರ್ಮ ತಿಳಿಸಿದ್ದರು. ಇದರಲ್ಲಿರುವ ಸ್ವಲ್ಪ ಹಣ ಕೃಷಿಯಿಂದ ಬಂದಿರುವ ಆದಾಯ ಎಂದು ಶಿವಕುಮಾರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು ಎಂದು ಇಡಿ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಹಣ ಬಂದಿದ್ದು ಎಲ್ಲಿಂದ?
ಐಟಿ ವಿಚಾರಣೆಯ ಸಂದರ್ಭದಲ್ಲಿ ಸುನೀಲ್ ಕುಮಾರ್ ಶರ್ಮಾ ಆ ಹಣ ತನ್ನದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ದೆಹಲಿ ಅಥವಾ ಸುತ್ತಮುತ್ತ ಯಾವುದೇ ವ್ಯವಹಾರವನ್ನು ಸುನೀಲ್ ಕುಮಾರ್ ಶರ್ಮಾ ಮಾಡುತ್ತಿಲ್ಲ. ಹೀಗಾಗಿ ಅವರ ಫ್ಲ್ಯಾಟ್ ಗೆ ಹಣ ಬಂದಿದ್ದು ಎಲ್ಲಿಂದ? ರಹಸ್ಯವಾಗಿ ಇಷ್ಟೊಂದು ಹಣವನ್ನು ಇಲ್ಲೇ ಯಾಕೆ ಇಡಲಾಗಿತ್ತು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಜಾರಿ ನಿರ್ದೇಶನಾಲಯದ ವಿಚಾರಣೆಯ ಸಂದರ್ಭದಲ್ಲೂ ಶಿವಕುಮಾರ್ ಈ ಬಗ್ಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಈ ಕಾರಣಕ್ಕಾಗಿ ಶಿವಕುಮಾರ್ ಅವರನ್ನು ಬಂಧಿಸಿದೆ ಎಂದು ಇಡಿ ಮೂಲವನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಹವಾಲಾ ಹಣವೇ?
ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆದ ದಾಳಿ ವೇಳೆ ಒಂದು ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಹಣಕ್ಕೆ ಕೆ.ಜಿ ಎಂದ ಸಂಕೇತಾಕ್ಷರ ಬಳಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ದೆಹಲಿಯಲ್ಲಿ ಪತ್ತೆಯಾದ 8.59 ಕೋಟಿ ರೂ. ‘ಹವಾಲಾ’ ಹಣವಾಗಿದ್ದು ಯಾರಿಗೋ ತಲುಪಿಸಲು ಈ ಹಣವನ್ನು ದೆಹಲಿಗೆ ತರಲಾಗಿದೆ ಎನ್ನುವ ಗಂಭೀರ ಆರೋಪ ಈಗ ಶಿವಕುಮಾರ್ ಮೇಲಿದೆ.

ಡಿಕೆಶಿ ನೀಡಿದ ಉತ್ತರ ಏನು?
8.59 ಕೋಟಿ ರೂ. ಪೈಕಿ 41.03 ಲಕ್ಷ ರೂ. ತನ್ನ ತಾಯಿ ಮತ್ತು ಸಹೋದರನ ಕೃಷಿ ಆದಾಯ ಎಂದು ಶಿವಕುಮಾರ್ ತಿಳಿಸಿದ್ದರು. ಆದರೆ, ಕೃಷಿ ಆದಾಯವನ್ನು ಹಿಂದಿನ ವರ್ಷಗಳಲ್ಲಿ ಸಲ್ಲಿಕೆ ಮಾಡಿರುವ ಐಟಿ ರಿಟರ್ನ್ ನಲ್ಲಿ ಉಲ್ಲೇಖ ಮಾಡದ ಪರಿಣಾಮ ಬೆಂಗಳೂರಿನಿಂದ ದೆಹಲಿಗೆ ತಂದಿರುವ ಕೋಟ್ಯಂತರ ರೂ. ಹಣವೂ ಹವಾಲಾ ಹಣ ಎನ್ನುವುದು ಐಟಿ ಆರೋಪ.

ಆಸ್ತಿ ಎಷ್ಟಿದೆ?
ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ, ಸಾರಿಗೆ ವ್ಯವಹಾರಗಳಲ್ಲಿ ಪಾಲುದಾರಿಕೆ, ನಾನಾ ಕಂಪನಿಗಳಲ್ಲಿ ಷೇರು ಖರೀದಿಸಿರುವ ಡಿಕೆ ಶಿವಕುಮಾರ್ 2018ರಲ್ಲಿ ಚುನಾವಣಾ ಆಯೋಗಕ್ಕೆ ನನ್ನ ಬಳಿ 619 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು. ಬ್ಯಾಂಕ್‍ಗಳಲ್ಲಿ ಹೂಡಿಕೆ, ಚಿನ್ನಾಭರಣ, ವಾಹನ ಮುಂತಾದ ಚರಾಸ್ತಿಯ ಮೌಲ್ಯ 70.95 ಕೋಟಿ ರೂ. ಇದ್ದರೆ ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 548.80 ಕೋಟಿ ರೂ. ಇದೆ. ಈ ಪೈಕಿ ಸ್ವಯಾರ್ಜಿತ ಆಸ್ತಿಯ ಮೌಲ್ಯ 541.73 ಕೋಟಿ ಇದ್ದರೆ, ತಮ್ಮ ಹಿರಿಯರಿಂದ ಬಳುವಳಿ ಪಡೆದ ಆಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 7.12 ಕೋಟಿ ರೂ. ಎಂದು ಉಲ್ಲೇಖಿಸಿದ್ದರು.

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತನ್ನ ಬಳಿ 251 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು 2008ರಲ್ಲಿ ನಡೆದ ಚುನಾವಣೆ ವೇಳೆ ತನ್ನ ಬಳಿ 75 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದರು.

251 ಕೋಟಿ ರೂ. ಆಸ್ತಿಯನ್ನು ಹೊಂದುವ ಮೂಲಕ ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. 2016ರ ಆಗಸ್ಟ್ ನಲ್ಲಿ ಅಸೋಶಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 496 ಕೋಟಿ ರೂ. ಆಸ್ತಿಯನ್ನು ಹೊಂದಿರುವ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರು ಎನಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ವರದಿ ತಯಾರಿಸಿತ್ತು.

ತೆರಿಗೆ ವಂಚನೆ ಕೇಸ್ ಎಲ್ಲಿಗೆ ಬಂದಿದೆ?
ದಾಳಿಯಲ್ಲಿ ಸಿಕ್ಕಿದ ಆಸ್ತಿಯನ್ನು ಆಧರಿಸಿ 2015-16, 2016-17 ಮತ್ತು 2017- 18ನೇ ಸಾಲಿನಲ್ಲಿ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂರು ಪ್ರತ್ಯೇಕ ಕೇಸ್ ದಾಖಲಿಸಿತ್ತು. ಈ ಮೂರು ಪ್ರಕರಣಗಳಿಂದ ಬಿಡುಗಡೆ ಮಾಡುವಂತೆ ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಆದರೆ ಐಟಿ ರಿಲೀಫ್ ಸಿಕ್ಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.

ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು ಹೇಗೆ?
ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.

ಇಡಿಗೆ ಅಧಿಕಾರವೇ ಇಲ್ಲ:
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇಲ್ಲ ಎಂದು ಡಿಕೆಶಿ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಹಿರಿಯ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಅವರು, ಐಟಿ ಇಲಾಖೆ ನೀಡಿದ ದಾಖಲೆಯೇ ತಪ್ಪು ಎನ್ನುವುದು ಈಗಾಗಲೇ ತಿಳಿದು ಬಂದಿದೆ. ಯಾರ ಜಾಗದಲ್ಲಿ 8.59 ಕೋಟಿ ರೂ. ಸಿಕ್ಕಿತ್ತೋ ಅವರು ಹಣ ನನ್ನದೇ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಯನ್ನು ಐಟಿ ತಿರಸ್ಕರಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಆರೋಪ ಏನು?
ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ರಾಜ್ಯಸಭೆಗೆ ಆಯ್ಕೆ ಆಗಬಾರದು ಎಂದು ಮೋದಿ ಮತ್ತು ಅಮಿತ್ ಶಾ ಪ್ಲಾನ್ ಮಾಡಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಕೈ ಶಾಸಕರಿಗೆ ಆಫರ್ ನೀಡಲಾಗಿತ್ತು. ಬಿಜೆಪಿಯಿಂದ ಕೈ ಶಾಸಕರನ್ನು ಡಿಕೆ ಶಿವಕುಮಾರ್ ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಇರಿಸಿ ರಕ್ಷಿಸಿದ್ದರು. ಈ ವಿಚಾರಕ್ಕೆ ಐಟಿ ರೇಡ್ ಮಾಡಿ ಡಿಕೆಶಿ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Click to comment

Leave a Reply

Your email address will not be published. Required fields are marked *