ಬೆಂಗಳೂರು: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶಾಮರಾಮ್ ಲೇಔಟಿನ ರಾಜಣ್ಣ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪತ್ನಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಮನೆಯಲ್ಲಿ ರಾಜಣ್ಣ ಹಾಗೂ ಪತ್ನಿ ಇಬ್ಬರೇ ವಾಸವಿದ್ದು, ಪತ್ನಿ ಜೊತೆ ಆಸ್ಪತ್ರೆಯಲ್ಲಿ ರಾಜಣ್ಣ ಉಳಿದುಕೊಂಡಿದ್ದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಹೋಗಿದ್ದರು. ಇದನ್ನು ಗಮನಿಸಿದ್ದ ಕಳ್ಳರು ರಾತ್ರಿ ರಾಜಣ್ಣ ಮನೆಗೆ ಕನ್ನ ಹಾಕಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಪತ್ನಿಯನ್ನು ಡಿಸ್ಚಾರ್ಜ್ ಮಾಡಿಸಲು ರಾಜಣ್ಣ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಹಣ ತರಲು ಮನೆಗೆ ಬಂದಾಗ 4.50 ಲಕ್ಷ ರೂ. ನಗದು ಹಾಗೂ 200 ಗ್ರಾಂ ಚಿನ್ನ, 3 ಕೆ.ಜಿ. ಬೆಳ್ಳಿಯನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
Advertisement
Advertisement
ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಆನೇಕಲ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಪಟ್ಟಣದಲ್ಲಿ ಕಳೆದ ಎರಡು ಮೂರು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಪೋಲಿಸರು ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಕಳ್ಳರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಕಳೆದ ಹದಿನೈದು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಜನರಲ್ಲಿ ಅರಿವು ಮೂಡಿಸಿ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಕಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಂದವು ಎನ್ನುವಷ್ಟರಲ್ಲಿ ಇದೀಗ ರಾಜಣ್ಣ ಅವರ ಮನೆಯಲ್ಲಿ ಕಳ್ಳತನವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.