Connect with us

Crime

ಸಿನಿಮಾ ನೋಡಿ ಹಣಕ್ಕಾಗಿ ಗೆಳೆಯನನ್ನೇ ಕಿಡ್ನಾಪ್ ಮಾಡಿ ಕೊಂದ

Published

on

– ಹತ್ಯೆಗೈದು 40 ಲಕ್ಷಕ್ಕೆ ಬೇಡಿಕೆಯಿಟ್ಟ

ಮುಂಬೈ: ಸಿನಿಮಾ ನೋಡಿ ಹಣದ ಆಸೆಗಾಗಿ ಸ್ನೇಹಿತನನ್ನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ.

ಅಬ್ದುಲ್ ಅಹಾದ್ ಸಿದ್ದಿಕಿ ಮೃತ ಬಾಲಕ. ಈತನ ಮೃತದೇಹ ಭಾನುವಾರ ಮುಂಜಾನೆ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಆವರಣದಲ್ಲಿ ಪತ್ತೆಯಾಗಿತ್ತು. ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ನಾಸಿರ್ ಶೇಖ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶೇಖ್ ಪಾರ್ಕಿಗೆ ಹೋಗುವ ನೆಪದಲ್ಲಿ ಶನಿವಾರ ಸಂಜೆ ಪಿಂಪ್ರಿ ಚಿಂಚ್‍ವಾಡ್‍ನ ದಪೋಡಿ ಪ್ರದೇಶದಿಂದ ತನ್ನ ಸ್ನೇಹಿತ ಸಿದ್ದಿಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಪಾರ್ಕಿನಲ್ಲಿ ಸುತ್ತಾಡಿ ಕೊನೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸಿದ್ದಿಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಸಿದ್ದಿಕಿಯ ಕುಟುಂಬದವರಿಗೆ ಫೋನ್ ಮಾಡಿ, 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ನಂತರ ಕುಟುಂಬದವರು ಗಾಬರಿಯಾಗಿ ಭೋಸಾರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ನಾವು ಕಾಲ್ ರೆಕಾರ್ಡಿಂಗ್‍ನಲ್ಲಿದ್ದ ಧ್ವನಿ ಕೇಳಿ ಶೇಖ್ ಎಂದು ಗುರುತಿಸಿದೆವು. ನಂತರ ಶೇಖ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದೆವು. ಆಗ ಮೃತದೇಹವಿರುವ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತನ ಕುಟುಂಬ ಪುಣೆಯ ಪಿಂಪ್ರಿ ಚಿಂಚ್‍ವಾಡ್ ಪ್ರದೇಶದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಭೋಸಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಖತರ್ನಾಕ್ ಕಿಲಾಡಿ -2’ ಸಿನಿಮಾ ನೋಡಿದ ನಂತರ ಹಣಕ್ಕಾಗಿ ತನ್ನ ಸ್ನೇಹಿತನನ್ನು ಅಪಹರಿಸುವ ಪ್ಲಾನ್ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *