– ಇಡೀ ಕುಟುಂಬದ ನಿರ್ವಹಣೆ ಮಾಡ್ತಿದ್ದ ಯುವತಿ
– ಶ್ರೀರಾಮುಲು ಗೃಹ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದಳು
ಬಳ್ಳಾರಿ: ಕುಡಿಯಲು ಹಣ ನೀಡದ್ದಕ್ಕೆ ಪಾನಮತ್ತಿನಲ್ಲಿದ್ದ ತಂದೆ ತನ್ನ ಮಗಳ ಕೈ-ಕಾಲು ಕಟ್ಟಿ ಹೆಚ್‍ಎಲ್‍ಸಿ ಕಾಲುವೆಗೆ ಎಸೆದು ಕೊಂದ ಘಟನೆಯೊಂದು ಬೆಳಕಿಗೆ ಬಂದಿದೆ.
ಪಲ್ಲವಿ (20) ಮೃತ ಯುವತಿ. ಬಳ್ಳಾರಿ ನಗರ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದ ರಾಮುಲು ದೇಗುಲದ ಬಳಿಯ ನಿವಾಸಿ ಆಟೋ ಸೂರಿ ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕುಡಿಯಲು ಹಣಕ್ಕಾಗಿ ಜಗಳ ಮಾಡುತ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಮಗಳು ಪಲ್ಲವಿ ಭಾನುವಾರ ತಂದೆಯೊಂದಿಗೆ ಜಗಳ ಮಾಡುತ್ತಾಳೆ. ಇದರಿಂದ ರೊಚ್ಚಿಗೆದ್ದ ಆರೋಪಿ ತಂದೆ ಕೆಲ ಸಮಯ ಹೊರಹೋಗಿ ಪಾನಮತ್ತನಾಗಿ ವಾಪಸ್ ಬಂದಿದ್ದಾನೆ. ಬಳಿಕ ಮಗಳನ್ನ ಪುಸಲಾಯಿಸಿ ಕಾಲುವೆ ಬಳಿ ಕರೆತಂದು, ಆಕೆಯ ಕೈ-ಕಾಲು ಕಟ್ಟಿ ಹಾಡಹಗಲೇ ಹೆಚ್‍ಎಲ್‍ಎಲ್‍ಸಿ ಕಾಲುವೆಗೆ ನೂಕಿದ್ದಾನೆ.
ಇದೇ ವೇಳೆ ಕಾಪಾಡಲು ಮುಂದಾದ ಯುವಕನಿಗೆ ಬೈದು ರಕ್ಷಣೆ ಮಾಡಬೇಡ ಎಂದಿದ್ದಾನೆ. ಮೃತ ಪಲ್ಲವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಗೃಹ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ಇಡೀ ಕುಟುಂಬದ ನಿರ್ವಹಣೆ ಮಾಡುತ್ತಿದ್ದಳು.
ಮಾಹಿತಿ ತಿಳಿದು ಸ್ಥಳಕ್ಕೆ ಎಸ್‍ಪಿ ಸಿ.ಕೆ.ಬಾಬಾ, ಎಎಸ್‍ಪಿ ಡಿ.ಲಾವಣ್ಯ, ಡಿವೈಎಸ್‍ಪಿ ರಾಮರಾಮ್ ಮತ್ತು ಕೌಲ್‍ಬಜಾರ್ ಪೊಲೀಸ್ ಠಾಣೆಯ ಪಿಎಸ್‍ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.