– ಕಂತೆ ಕಂತೆ ನೋಟಿನೊಂದಿಗೆ ಮೂವರು ವಶಕ್ಕೆ
ಬೆಂಗಳೂರು: ಆನ್‍ಲೈನ್ ಮೂಲಕ ವಂಚಿಸಿ ಬರೋಬ್ಬರಿ 3 ಕೋಟಿ ರೂಪಾಯಿ ಡ್ರಾ ಮಾಡಿದ್ದ ಖದೀಮರು ಬೇರೆ ಬ್ಯಾಂಕ್‍ಗೆ ಹಾಕಲು ಬಂದಾಗ ಸಿಕ್ಕಿ ಹಾಕಿಕೊಂಡಿದ್ದು, ಇದೀಗ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರಿಶಿತ್ ನಾಯ್ಡು, ಗುರು ಮತ್ತು ರಂಗಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂವರು ವ್ಯಕ್ತಿಗಳು ಕೋಟಿ ಕೋಟಿ ಹಣವನ್ನು ಬ್ಯಾಂಕ್‍ಗೆ ಕಟ್ಟಲು ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕ್‍ಗೆ ಬಂದಿದ್ದರು. ಹಣ ನೋಡಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಭಯ ಭೀತರಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಟೌನ್ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಹಣ ಯಾರಿಗೆ ಸೇರಿದ್ದು ಎಂದು ವಿಚಾರಣೆ ಶುರು ಮಾಡಿದ್ದಾರೆ.
ಆರೋಪಿಗಳು ಮೂರು ದೊಡ್ಡ ಬ್ಯಾಗಿನಲ್ಲಿ ಹಣವನ್ನು ತಂದಿದ್ದರು. ಈ ಮೂವರು ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣವನ್ನು ಬೆಂಗಳೂರಿನ ರಾಮಮೂರ್ತಿನಗರದ ಐಸಿಐಸಿಐ ಬ್ಯಾಂಕಿನಿಂದ ಡ್ರಾ ಮಾಡಿದ್ದರು. ಡ್ರಾ ಮಾಡಿದ್ದ ಹಣವನ್ನು ಬೇರೆ ಅಕೌಂಟ್‍ಗೆ ಹಾಕಲು ಬಂದಿದ್ದಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ವಂಚಿಸಿದ್ದ ಮೂರು ಕೋಟಿಯಲ್ಲಿ ನೆಲಮಂಗಲದ ಐಸಿಐಸಿಐ ಬ್ಯಾಂಕ್‍ಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಿದ್ದರು. ಆರೋಪಿಗಳು ನಕಲಿ ಫೋನ್ ನಂಬರ್ ಉಪಯೋಗಿಸಿ ಹಣವನ್ನು ಡ್ರಾ ಮಾಡಿದ್ದರು. ಜೊತೆಗೆ ಆರೋಪಿಗಳು ಹಣ ಡ್ರಾ ಮಾಡಲು ನಕಲಿ ಚೆಕ್‍ಬುಕ್ ಬಳಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.