ಬೆಂಗಳೂರು: ಎಟಿಎಂ ವಾಹನದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಗರದ ಹಲಸೂರು ಬಳಿಯ ಗುರುದ್ವಾರದ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಕೂಡ್ಲಿಗೇಟ್ ನಿಂದ ಹಲಸೂರು ರಸ್ತೆ ಕಡೆಗೆ ತೆರಳುತ್ತಿದ್ದ ವಾಹನವನ್ನು ಪರಿಶೀಲಿಸಿದಾಗ ಕೋಟ್ಯಂತರ ರೂ. ಪತ್ತೆಯಾಗಿದೆ. ಎಟಿಎಂ ವಾಹನದಲ್ಲಿ ಬ್ಯಾಗ್ ಗಳ ಮೂಲಕ ಹಣವನ್ನು ಸಾಗಿಸಲಾಗುತ್ತಿತ್ತು. ಅನುಮಾನಾಸ್ಪದ ಹಣ ಎಂದು ತಿಳಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂ ವಾಹನ ಇದಾಗಿದ್ದು, ಅಂದಾಜು ಎರಡು ಕೋಟಿ ರೂ.ಗೂ ಅಧಿಕ ಹಣ ಇದೆ. ವಿಚಾರಣೆ ವೇಳೆ ಹಣ ಸಾಗಾಟದ ಬಗ್ಗೆ ಚಾಲಕ ಹಾಗೂ ಗನ್ ಮ್ಯಾನ್ ಮಾಹಿತಿ ನೀಡಿಲ್ಲ. ದಾಖಲೆಗಳಿಲ್ಲದೆ ಹಣ ಸಾಗಿಸಲಾಗುತ್ತಿತ್ತು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Advertisement
ಚುನಾವಣಾಧಿಕಾರಿಗಳು ದಾಖಲೆ ಕೇಳಿದರೆ, ಬಿಟ್ಟು ಬಂದಿದ್ದೇವೆ ಎಂದು ಎಟಿಎಂ ವಾಹನದ ಚಾಲಕ ಹಾಗೂ ಗನ್ ಮ್ಯಾನ್ ಸಬೂಬು ಹೇಳಿದ್ದಾರೆ. ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಒಬ್ಬ ಅಧಿಕಾರಿ, ಗನ್ ಮ್ಯಾನ್, ಡ್ರೈವರ್ ಅವರನ್ನು ವಾಹನ ಸಮೇತ ಭಾರತಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೂರ್ವ ವಿಭಾಗ ಡಿಸಿಪಿ ಶರಣಪ್ಪ, ಎಸಿಪಿ ಫಾತೀಮಾ, ಇನ್ಸ್‌ಪೆಕ್ಟರ್ ಜಿ.ಪಿ.ರಮೇಶ್ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ ಹಣ ಪರಿಶೀಲಿಸಿ, ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.