ಬೆಂಗಳೂರು: ಸೋಮವಾರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕೃತಗೊಳಿಸಿದ್ದಾರೆ.
ಶುಕ್ರವಾರ ದೆಹಲಿಯಿಂದ ಹಿಂದಿರುಗಿದ ಬಳಿಕ ಎರಡ್ಮೂರು ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಇಂದು ಸೋಮವಾರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಖಚಿತಗೊಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ, ನಾವು ಇರಿಸಿದ ಪಟ್ಟಿಯನ್ನು ಪಕ್ಷದ ವರಿಷ್ಠರು ಒಪ್ಪಿದ್ದಾರೆ. ಕೆಲವರನ್ನು ಮನವೊಲಿಸಿ ಹಾಗೂ ರಾಜ್ಯದ ಕೆಲ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯವಿರುವ ಮೂರು ಡಿಸಿಎಂ ಸ್ಥಾನಗಳನ್ನು ಮುಂದುವರಿಸಲಾಗುವುದು. ಮತ್ತೆ ಹೊಸ ಡಿಸಿಎಂ ಹುದ್ದೆ ಸೃಷ್ಟಿಸಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಕನಸು ಕಾಣುತ್ತಿದ್ದ ಸಚಿವ ಶ್ರೀರಾಮುಲು ಮತ್ತು ಶಾಸಕ ರಮೇಶ್ ಜಾರಕಿಹೊಳಿಗೆ ಶಾಕ್ ನೀಡಿದ್ದರು.