ಲಕ್ನೋ: ಫ್ರೀಯಾಗಿ ಮೋಮೋಸ್ (Momos) ತಿನ್ನುವ ಆಸೆಗೆ ಬಿದ್ದು ಬಾಲಕನೋರ್ವ 85 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು (Jewellery) ಬೀದಿ ಬದಿ ವ್ಯಾಪಾರಿಗಳಿಗೆ (Street Vendor) ಕೊಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
7ನೇ ತರಗತಿ ಓದುವ ಬಾಲಕನೊಬ್ಬನಿಗೆ ಮೋಮೋಸ್ ಮೇಲಿದ್ದ ವ್ಯಾಮೋಹ ಕಂಡುಕೊಂಡಿದ್ದ ಕಿರಾತಕರು, ಇದನ್ನೇ ಬಂಡವಾಳವನ್ನಾಗಿಸಿಕೊಂಡು ಆತನಿಂದ 85 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾರೆ.
ವಾರಣಾಸಿಯ ದೇಗುಲದಲ್ಲಿ ವಿಮಲೇಶ್ ಮಿಶ್ರಾ ಎಂಬವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಮಗನಿಗೆ ಮೋಮೋಸ್ ಎಂದರೆ ಪ್ರಾಣ. ದಿಯೋರಿಯಾ ನಗರದಲ್ಲಿ ಮೋಮೋಸ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಮೂವರು ವ್ಯಾಪಾರಿಗಳು ನಿತ್ಯ ಆತನ ಅಭ್ಯಾಸವನ್ನು ಗಮನಿಸುತ್ತಿದ್ದು, ಬಾಲಕನಿಗೆ ಮೋಮೋಸ್ ಆಮಿಷವೊಡ್ಡಿದ್ದಾರೆ.
ಮನೆಯಲ್ಲಿರುವ ಎಲ್ಲಾ ಚಿನ್ನಾಭರಣ ತಂದುಕೊಟ್ಟರೆ, ಎಷ್ಟು ಬೇಕೋ ಅಷ್ಟು ಮೋಮೋಸ್ ಕೊಡುತ್ತೇವೆ ಎಂದಿದ್ದಾರೆ. ಇದನ್ನೇ ನಂಬಿದ ಬಾಲಕ ಮನೆಯ ಲಾಕರ್‌ನಲ್ಲಿದ್ದ ಚಿನ್ನವನ್ನು ಕದ್ದು ಹಂತ ಹಂತವಾಗಿ ವ್ಯಾಪಾರಿಗಳಿಗೆ ಕೊಟ್ಟಿದ್ದಾನೆ. ಹೀಗೆ ಮನೆಯಲ್ಲಿದ್ದ ಬಹುತೇಕ ಆಭರಣಗಳು ವ್ಯಾಪಾರಿಗಳ ಪಾಲಾಗಿದೆ.
ಚಿನ್ನ ಕಾಣೆಯಾಗಿದ್ದು ತಿಳಿದುಬಂದಿದ್ದು ಹೇಗೆ?
ವಿಮಲೇಶ್ ಮಿಶ್ರಾ ಅವರ ಸಹೋದರಿ ಅಂದರೆ ಬಾಲಕನ ಅತ್ತೆ ಮನೆಗೆ ಭೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಣ್ಣನ ಬಳಿ ತನ್ನ ಆಭರಣ ಬೇಕು ಎಂದು ಕೇಳಿದ್ದಾರೆ. ಈ ವೇಳೆ ವಿಮಲೇಶ್ ಅವರು ಕಬೋರ್ಡ್ ತೆರೆದಾಗ ಈ ವಿಚಾರ ಬೆಳಕಿಗೆ ಬಂದಿದೆ. ಗಾಬರಿಗೊಂಡ ಪೋಷಕರು ಬಾಲಕನನ್ನು ಪ್ರಶ್ನಿಸಿದಾಗ, ನಂಗೆ ಫ್ರೀಯಾಗಿ ಮೋಮೋಸ್ ಕೊಡುತ್ತೇನೆ ಅಂದ್ರು ಹಾಗಾಗಿ ಚಿನ್ನವನ್ನು ಅಂಗಡಿಯವರಿಗೆ ಕೊಟ್ಟೆ ಎಂದು ಬಾಯಿಬಿಟ್ಟಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ವಿಮಲೇಶ್ ಮಿಶ್ರಾ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಪತ್ತೆಯಾಗಿರುವ ಮೂವರು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

