ಬೆಂಗಳೂರು: ವಿಚ್ಛೇದನ ಪ್ರಕರಣದಲ್ಲಿ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿ ಸೊಸೆಗೆ ಸೂಕ್ತ ಜೀವನಾಂಶ ಸಿಗುವಂತಾದ ಘಟನೆ ನಡೆದಿದೆ. ಇದರಲ್ಲಿ ಗಮನಾರ್ಹ ಸಂಗತಿಯೆಂದರೆ ದಿವಂಗತ, ಮಾಜಿ ಸಚಿವ ಎಸ್‍ಆರ್ ಕಾಶಪ್ಪನವರ್ ಅವರ ಪುತ್ರ ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ಅವರ ವಿಚ್ಛೇದನ ಪ್ರಕರಣದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24ರಂದು ತೀರ್ಪು ಪ್ರಕಟಿಸಿದ ಕೌಟುಂಬಿಕ ನ್ಯಾಯಾಲಯ, ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ತನ್ನ ಹೆಂಡತಿಗೆ ಶಾಶ್ವತ ಜೀವನಾಂಶವಾಗಿ 4 ಕೋಟಿ ರೂ. ಹಣವನ್ನು 60 ದಿನಗಳೊಳಗೆ ಕೊಡಬೇಕು ಎಂದು ಹೇಳಿದೆ.
Advertisement
2015ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ 4.85 ಕೋಟಿ ರೂ. ಜೀವನಾಂಶ ನೀಡಬೇಕೆಂದು ಕೇಳಿದ್ದರು. ದೇವಾನಂದ್ ದಂಪತಿ 4 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗಳಿಸಲು ನಿರ್ಧರಿಸಿ 2012ರ ಫೆಬ್ರವರಿ 12ರಿಂದ ಪ್ರತ್ಯೇಕವಾಗಿ ವಾಸವಿದ್ದರು ಎಂಬುದನ್ನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಭಾಗ್ಯ ಮನಗಂಡಿದ್ದರು.
Advertisement
ಅರ್ಜಿದಾರ ಮಹಿಳೆ ಗಂಡನೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿದರಾದ್ರೂ ಅದಕ್ಕೆ ಪತಿಯಿಂದ ಸರಿಯಾದ ಪ್ರತಿಕ್ರಿಯೆ ಇರಲಿಲ್ಲ. 1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)ರ ಪ್ರಕಾರ ದಂಪತಿ ಅರ್ಜಿ ಸಲ್ಲಿಸುವ ವೇಳೆಗೆ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ದೂರ ಉಳಿದಿದ್ದರೆ ಅವರಿಗೆ ವಿಚ್ಛೇದನ ನೀಡಬೇಕು. ಅಲ್ಲದೆ ಸ್ವತಃ ದೇವಾನಂದ್ ಅವರ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿದ್ದರು. ಅರ್ಜಿದಾರ ಮಹಿಳೆಯೊಂದಿಗೆ ಮದುವೆಯಾಗಿದ್ದಾಗಲೇ ನನ್ನ ಮಗ ಮತ್ತೋರ್ವ ಮಹಿಳೆಯೊಂದಿಗೆ ಮದುವೆಯಾಗಿದ್ದು, ಅವರಿಗೆ ಮಗುವೂ ಇದೆ ಎಂದು ಹೇಳಿದ್ದರು.
Advertisement
ತಾಯಿ ಹೇಳಿದ್ದು ಏನು? ಕುಟುಂಬ ಸದಸ್ಯರು ಹಾಗೂ ಹಿರಿಯರ ಇಷ್ಟಕ್ಕೆ ವಿರುದ್ಧವಾಗಿ ನನ್ನ ಮಗ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ನನ್ನ ಸೊಸೆಯನ್ನ ಒಂಟಿ ಮಾಡಿದ್ದಾನೆ. ವೈವಾಹಿಕ ಜವಾಬ್ದಾರಿಗಳನ್ನ ಪೂರೈಸಿಲ್ಲ. ನನ್ನ ಮಗನಿಗೆ ಸಾಕಷ್ಟು ಭೂಮಿ ಇದ್ದು, ಕ್ವಾರಿ ಬ್ಯುಸಿನೆಸ್ ಮಾಡುತ್ತಾನೆ. ಸಾಕಷ್ಟು ಹಣ ಗಳಿಸುತ್ತಾನೆ. ಆತನ ಬಳಿ 1 ಕೋಟಿಗೂ ಹೆಚ್ಚಿನ ಮೌಲ್ಯದ ಮರ್ಸಿಡಿಸ್ ಬೆನ್ಜ್ ಕಾರ್ ಇದೆ. ಆದ್ದರಿಂದ ಆತ ಇಷ್ಟೊಂದು ಮೊತ್ತದ ಜೀವನಾಂಶ ಕೊಡಲು ಶಕ್ತನಾಗಿದ್ದಾನೆ ಎಂದು ಅರ್ಜಿದಾರ ಮಹಿಳೆಗೆ ಅಜ್ಜಿಯೂ ಆಗಿರುವ ಎಸ್‍ಆರ್ ಕಾಶಪ್ಪನವರ್ ಪತ್ನಿ ತನ್ನ ಅಫಿಡವಿಟ್‍ನಲ್ಲಿ ಹೇಳಿದ್ದರು. ಅಲ್ಲದೆ ದೇವಾನಂದ್ ಅವರಿಗೆ ನೋಟಿಸ್ ನೀಡಿದ್ದರೂ ಕೂಡ ಕೋರ್ಟ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರಲಿಲ್ಲ.
Advertisement
ಅರ್ಜಿದಾರ ಮಹಿಳೆಗೆ ದೇವಾನಂದ್ ಸೋದರಮಾವನಾಗಿದ್ದು, 2011ರ ಮೇ 22ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳ್ಕಲ್‍ನ ಶ್ರೀ ಆರ್ ವೀರಮಣಿ ಸ್ಟೇಡಿಯಂನಲ್ಲಿ ಈ ಇಬ್ಬರ ಮದುವೆಯಾಗಿತ್ತು. ಮದುವೆಯಾದಾಗ ನಾನು ಬಿಬಿಎ ಓದುತ್ತಿದ್ದೆ. ಇಷ್ಟವಿಲ್ಲದೆ ಮದುವೆಯಾದೆ. ಮದುವೆಯಾದ ಕೆಲವೇ ವಾರಗಳಲ್ಲಿ ನನ್ನ ಪತಿಯ ವರ್ತನೆ ಸಂಪೂರ್ಣವಾಗಿ ಬದಲಾಗಿತ್ತು. ಅವರು ನನ್ನನ್ನು ಅಪರಿಚಿತಳಂತೆ ನೋಡುತ್ತಿದ್ರು. ಎರಡನೇ ಮದುವೆಯಾಗಿದ್ದಾರೆಂಬ ಸುದ್ದಿ ಕೇಳಿ ಈ ಬಗ್ಗೆ ಅವರ ಜೊತೆ ಮಾತನಾಡಿದೆ. ಆಗ ದೇವಾನಂದ್ ಅವರು ನನ್ನನ್ನು ನಿಂದಿಸಿದ್ರು. ನಾನು ನನ್ನ ತಂದೆಯ ಆಸೆ ಪೂರೈಸಲು ನಿನ್ನನ್ನು ಮದುವೆಯಾಗಿದ್ದಷ್ಟೇ ಎಂದು ಹೇಳಿದ್ರು ಅಂತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ರು.