ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.
ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Advertisement
ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.
Advertisement
ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.
ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.