ಮನೆಯ ಪಡಸಾಲೆಯಲ್ಲಿ ಕೂತು ದಿನಾ ಕಣ್ಣೀರಲ್ಲಿ ಕೈ ತೊಳೆಯೋ ಮಾನಿಕಾ ಅನ್ನೋ ಹೆಣ್ಣಿನ ಕಥೆಯಲ್ಲ, ಜೀವನ ಇದು. ಈಗಂತೂ ಮಾನಿಕಾಳ ಕಣ್ಣಾಲಿಗಳು ಅತ್ತು ಅತ್ತು ಸಂಪೂರ್ಣವಾಗಿ ಬತ್ತಿ ಹೋಗಿವೆ. 14ರ ಹರೆಯದಲ್ಲಿ ಮದುವೆಯಾಗಿ ಸುಂದರ ಕನಸುಗಳನ್ನು ಕಾಣುತ್ತಾ ಗಂಡನ ಮನೆಗೆ ಕಾಲಿಟ್ಟಾಗ ಮಾನಿಕಾಗೆ ಈಗ ಕೇವಲ 21ರ ಹರೆಯ. ಈಗಂತೂ ಮಾನಿಕಾಗೆ ಈಗ ಗಂಡನ ಮನೆ ಹಾಗೂ ತನ್ನ ತವರು ಮನೆ ಅಕ್ಷರಶಃ ನರಕವಾಗಿಬಿಟ್ಟಿದೆ. ಶೌಚಾಲಯಕ್ಕೆ ಹೋಗಬೇಕೆಂದರೂ ಮನೆಯವರ ಅನುಮತಿ ಇಲ್ಲದೆ ಹೊರಹೋಗುವಂತಿಲ್ಲ.
ಹೊರಗಿನವರು ಬಿಡಿ ಮಾನಿಕಾಳ ಮನೆಯವರೇ ಆಕೆಯನ್ನು ಅಸ್ಪೃಶ್ಯಳಂತೆ ಕಾಣತೊಡಗಿದ್ದಾರೆ. ಮದುವೆಯಾಗಿ ಸರಿಯಾಗಿ ಎರಡು ವರ್ಷ ತುಂಬುತ್ತಿದ್ದಂತೆ ಮಾನಿಕಾ 5 ಜನ ಗಂಡಸರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಹರಿಯಾದ ಪಾನಿಪತ್, ಸೋನೇಪತ್, ಕುರುಕ್ಷೇತ್ರ ಹೀಗೆ ನಾನಾ ಕಡೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಮಾನಿಕಾ ದೈಹಿಕ ದೌರ್ಜನ್ಯವನ್ನು ಅನುಭವಿಸಿದ್ದಳು. ಹೀಗಾಗಿ ಆಕೆಯ ಮನೆಯವರ ಪ್ರಕಾರ ಇಂತಹಾ ಘಟನೆ ನಡೆಯಲು ಮಾನಿಕಾಳೇ ನೇರ ಕಾರಣ ಎಂದಾಗಿತ್ತು. ಆರೋಪಿಗಳಿಗೇನೋ ಸಜೆಯಾಯಿತು. ಆದ್ರೆ, ಮಾನಿಕಾ ಇಂದಿಗೂ ಮನೆಯವರ ಅಮಾನವೀಯ ವರ್ತನೆಯಿಂದಾಗಿ ಬೇಸತ್ತು ಹೋಗಿದ್ದಾಳೆ.
Advertisement
ಹೇಳಿ ಕೇಳಿ ಮಾನಿಕಾ ವಾಸವಾಗಿದ್ದದ್ದು ಪುಟ್ಟ ಹಳ್ಳಿಯೊಂದರಲ್ಲಿ. ಅನಕ್ಷರಸ್ಥರೇ ಹೆಚ್ಚಿರುವ ಹಳ್ಳಿಯಲ್ಲಿ ಮಾನಿಕಾಳ ಸ್ಥಿತಿ ಕಂಡು ಮರುಗುವವರಿಗಿಂತ ದೂಷಿಸುವವರೇ ಹೆಚ್ಚಿದ್ದರು. ಹೀಗಾಗಿ ಸಾಯೋಕೂ ಆಗದೆ ಬದುಕೋಕೂ ಆಗದೆ ಇಂದಿಗೂ ಕಣ್ಣೀರಲ್ಲಿ ಕೈ ತೊಳೀತಿದ್ದಾಳೆ. ಇದು ಕೇವಲ ಮಾನಿಕಾಳ ಕಥೆಯಲ್ಲ. ಆಕೆಯ ಮೇಲೆ ಗ್ಯಾಂಗ್ ರೇಪ್ ಆಗಿದ್ದು 2012ರ ಸೆಪ್ಟೆಂಬರ್ 28 ರಂದು. ಅದೇ ತಿಂಗಳಲ್ಲಿ ಒಟ್ಟು 12 ಅತ್ಯಾಚಾರ ಪ್ರಕರಣಗಳು ಹರಿಯಾಣದಲ್ಲಿ ದಾಖಲಾಗಿತ್ತು. ಇದು ಕೇವಲ ಒಂದು ನಿದರ್ಶನ ಅಷ್ಟೇ. ಕೆಳ ವರ್ಗದ, ಭೂ ರಹಿತ ಸಮುದಾಯದ ಒಬ್ಬ ಹೆಣ್ಣು ಮಗಳು ಇಂದಿಗೂ ಈ ರೀತಿಯ ಕಷ್ಟ ಅನುಭವಿಸ್ತಾ ಇದ್ದಾಳೆ ಅಂದ್ರೆ ಭಾರತದಲ್ಲಿ ಇನ್ನು ಅತ್ಯಾಚಾರಕ್ಕೆ ಒಳಗಾದ ಅದೆಷ್ಟೋ ಹೆಣ್ಣು ಮಕ್ಕಳ ಸ್ಥಿತಿ ಹೇಗಿರಬೇಡ ಯೋಚಿಸಿ.
Advertisement
ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ಮಾನಸಿಕ ಆಸರೆ, ಆರೈಕೆ ಬೇಕಾಗುತ್ತದೆ ಅನ್ನೋ ಕನಿಷ್ಠ ಸೌಜನ್ಯವೂ ನಮ್ಮ ಜನಕ್ಕೆ ಯಾಕೆ ಬಂದಿಲ್ಲ? ಇಂಡಿಯಾಸ್ ಡಾಟರ್ ಅನ್ನೋ ಶೀರ್ಷಿಕೆ ಅಡಿ ದೆಹಲಿ ನಿರ್ಭಯಾ ಅತ್ಯಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಸಾಕಷ್ಟು ವಿವಾದ ಎದ್ದಿದ್ದು ನಿಮಗೆಲ್ಲ ನೆನಪಿರಬಹುದು. ಆ ನಿರ್ಭಯಾ ಈಗ ನಮ್ಮ ನಡುವೆ ಇಲ್ಲ. ಒಂದು ವೇಳೆ ಆಕೆ ಬದುಕಿದ್ದಿದ್ರೆ ನಮ್ಮ ಸಮಾಜ ಆಕೆಯನ್ನು ಯಾವ ರೀತಿ ನೋಡುತ್ತಿತ್ತು? ಎಲ್ಲೋ ಒಂದೋ ಎರಡೋ ಉದಾರ ಮನಸ್ಥಿತಿಯವರು ಇರಬಹುದು. ಆದ್ರೆ, ಎಲ್ಲರೂ ಆಕೆಯನ್ನು ಮುಕ್ತ ಮನಸ್ಸಿನಿಂದ ನಮ್ಮಲ್ಲಿ ಆಕೆಯೂ ಒಬ್ಬಳು ಅನ್ನೋದಾಗಿ ಸ್ವೀಕಾರ ಮಾಡುತ್ತಿದ್ದರಾ ಗೊತ್ತಿಲ್ಲ. ಬಹುಶಃ ಅತ್ಯಾಚಾರ ಸಂತ್ರಸ್ತೆ ಅನ್ನೋ ಹಣೆ ಪಟ್ಟಿ ಕೊನೆಯವರೆಗೂ ಆಕೆಯ ಹಿಂದೆ ಭೂತದಂತೆ ಕಾಡ್ತಾನೇ ಇರ್ತಾ ಇತ್ತೇನೋ.
Advertisement
ಇನ್ನು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಅಪರಾಧಿ ಮುಖೇಶ್ ಅತ್ಯಾಚಾರ ಮಾಡುವುದಕ್ಕೆ ನಿರ್ಭಯಾಳೇ ಕಾರಣವಾಗಿದ್ದಳು ಅಂತಾ ಏನೊಂದೂ ಪಶ್ಚಾತಾಪವಿಲ್ಲದೇ ಹೇಳಿಕೆ ಕೊಟ್ಟಿದ್ದ. ಹಾಗಾದ್ರೆ, ಶೌಚಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾನಿಕಾಳ ಮೇಲೆ ಅತ್ಯಾಚಾರವಾಗಿತ್ತು. ನಮ್ಮ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಹೋಗುವುದಕ್ಕೂ ಅನುಮತಿ ಇಲ್ಲವೇ? ಇನ್ನು ನಿರ್ಭಯಾ ರಾತ್ರಿ ಹೊತ್ತಲ್ಲಿ ತಿರುಗಾಡುತ್ತಿದ್ದದ್ದು, ಸಿನಿಮಾ ಹೋಗುತ್ತಿದ್ದದ್ದು ತಪ್ಪು ಎಂದಾದರೆ ಚಿಕ್ಕ ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತದಲ್ಲಾ? ಅವರೆಲ್ಲಾ ಆಟ ಆಡುವುದು, ಶಾಲೆಗೆ ಹೋಗುವುದು, ಅಂಕಲ್ ಅಂತಾ ಎಳೆ ತೋಳಲ್ಲಿ ಬಂದು ಆಲಂಗಿಸುತ್ತವಲ್ಲಾ ಅವೆಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬೇಕೇ ಅನ್ನುವ ಪ್ರಶ್ನೆ ಕೂಡಾ ಕಾಡುತ್ತೆ.
Advertisement
ಅತ್ಯಾಚಾರಕ್ಕೆ ಒಳಗಾಗೋ ಹೆಣ್ಣು ತನಗಾಗುವ ದೈಹಿಕ ಹಾಗೂ ಮಾನಸಿಕ ಆಘಾತಕ್ಕಿಂತ ಅದರ ನಂತರದಲ್ಲಿ ಬಚಾವಾಗಿ ಇದೇ ಸಮಾಜವನ್ನು ಎದುರಿಸಬೇಕಾಗುತ್ತದಲ್ಲಾ ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ತನ್ನನ್ನು ನೋಡುವ ಸಾವಿರಾರು ಕಣ್ಣುಗಳು ಕುಟುಕೋ ಭಯ, ಮೊನಚು ಮಾತುಗಳಿಂದಾಗುವ ನೋವು, ಯಾರೋ ಆಡಿಕೊಂಡು ನಗುವ ಸಂದರ್ಭ, ಹೀಗೆ ಹೆಣ್ಣು ದಿನಾ ಒಂದಲ್ಲಾ ಒಂದು ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುತ್ತಾಳೆ. ಬೆಂಕಿಯಿಂದ ಬಾಣಲೆಗೆ ಬೀಳುವ ಸ್ಥಿತಿ ಆಕೆಯದ್ದು. ಆಕೆಯ ದುಗುಡ, ಆತಂಕವನ್ನು ಯಾರಾದರೂ ಪರಿಹರಿಸಬಲ್ಲರಾ? ಇನ್ನು ಮಾನಿಕಾಳ ಈಗಿನ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ಆಕೆ ಏನಾದರೂ ಬನ್ನಿ ನನ್ನ ಮೇಲೆ ಅತ್ಯಾಚಾರ ಎಸಗಿ, ನಾನು ನಿಮ್ಮ ದೈಹಿಕ ವಾಂಛೆಗಳನ್ನು ಈಡೇರಿಸುತ್ತೇನೆ ಅನ್ನೋದಾಗಿ ಹೇಳಿದ್ದಳಾ? ಇಲ್ಲವಲ್ಲಾ? ಅಂದ ಮೇಲೆ ಆಕೆಗೆ ಮನೆಯಿಂದ ಹೊರ ಹೋಗದ ಸ್ಥಿತಿ ಯಾಕೆ ಬಂತು? ಗಂಡನೊಡನೆ ಸೇರಿ ಅದೆಷ್ಟೋ ತಿಂಗಳುಗಳೇ ಇರುಳಿದವು. ಹಾಗಾದ್ರೆ, ಜೀವನ ಪೂರ್ತಿ ಇದೇ ರೀತಿ ಇರಬೇಕಾ?
ಹೆಣ್ಣು ಅಂದ್ರೆ ನಮ್ಮ ಸುಖಕ್ಕೆ ಅನ್ನೋ ಧೋರಣೆ ಏನಾದರೂ ಈ ಸಮಾಜದಲ್ಲಿ ಇದೆಯಾ? ಅಥವಾ ಹೆಣ್ಣಿಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ ಅನ್ನೋದು ಮರೀಚಿಕೆಯಾಯಿತೇ? ಇಲ್ಲಾ ತನ್ನ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕು ಆಕೆಗಿಲ್ಲವೇ? ಒಬ್ಬ ಹೆಣ್ಣಾಗಿ ಇಂತಹಾ ಅನೇಕ ಪ್ರಶ್ನೆಗಳು ದಿನಾ ಮನಸ್ಸಿನಲ್ಲಿ ಕೊರೆಯುತ್ತಲೇ ಇರುತ್ತದೆ. ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತೀ 1 ನಿಮಿಷಕ್ಕೊಂದು ಲೈಂಗಿಕ ದೌರ್ಜನ್ಯ, ಪ್ರತೀ 20 ನಿಮಿಷಕ್ಕೊಂದು ಅತ್ಯಾಚಾರ, 150 ನಿಮಿಷಕ್ಕೊಂದು 16 ವರ್ಷದ ಒಳಗಿನ ಹೆಣ್ಣು ಮಗುವಿನ ಮೇಲೆ ರೇಪ್ ಆಗುತ್ತದೆ. ಇದರಲ್ಲಿ ದಾಖಲಾಗದ ಪ್ರಕರಣಗಳು ಅದೆಷ್ಟು ಅನ್ನೋದು ಇದುವರೆಗೂ ಕಂಡುಕೊಳ್ಳಲಾಗಿಲ್ಲ. ಹಾಗಾದರೆ ನಾವು ಎಂಥಾ ಹೇಸಿಗೆಯಲ್ಲಿದ್ದೇವೆ? ನಾವು ಮನೆಯಿಂದ ಹೊರಗೆ ಹೊರಟಾಗ ಅದೆಷ್ಟು ಕಾಮಾಲೆ ಕಣ್ಣುಗಳು ನಮ್ಮನ್ನು ಅದೆಂತೆಂಥಾ ಭಾವನೆಯಿಂದ ನೋಡಬಹುದು ಅನ್ನೋದನ್ನು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ನಮಗೂ ಬದುಕುವ ಹಕ್ಕಿದೆ, ಇಷ್ಟ ಕಷ್ಟಗಳ ಪರಿವೆ ಇದೆ. ಹೆಣ್ಣು ದೈಹಿಕವಾಗಿ ಪುರುಷರಷ್ಟು ಶಕ್ತಳಲ್ಲ ಅನ್ನೋ ಒಂದು ಅಂಶವನ್ನು ಬಳಸಿಕೊಂಡು ಸರಕಾಗಿ ನೋಡುವ ಪ್ರವೃತ್ತಿ ಯಾವಾಗ ದೂರವಾಗುತ್ತದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ದನಿಯಾಗಿ ಬೆಂಬಲ ಕೊಡುವ ಮನಸ್ಥಿತಿ ಈ ಸಮಾಜಕ್ಕೆ ಯಾಕಿಲ್ಲ? ಅದೆಷ್ಟೋ ಸಂತ್ರಸ್ತರು ಮರ್ಯಾದೆಗೆ ಅಂಜಿ ಸುಮ್ಮನೆ ಇದ್ದು ಬಿಡ್ತಾರೆ. ಕಾಮುಕರ ಬೆದರಿಕೆಗಳಿಗೆ ಹೆದರಿ ಅದೆಷ್ಟೋ ಪ್ರಕರಣಗಳು ಮುಚ್ಚಿಹೋಗುತ್ತದೆ. ಇನ್ನೂ ಕೆಲವಷ್ಟು ಕಡೆ ಅತ್ಯಾಚಾರಿಗೇ ಮದುವೆ ಮಾಡಿಕೊಡುವ ಪ್ರವೃತ್ತಿಯೂ ಇದೆ. ಅತ್ಯಾಚಾರಿಯನ್ನು ದಂಡಿಸುವ ಕಾನೂನುಗಳು ಇದೆ ಅನ್ನೋ ಜ್ಞಾನವೂ ಅದೆಷ್ಟೋ ಜನರಿಗೆ ಇರುವುದಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಲೂ ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ಇವಕ್ಕೆಲ್ಲಾ ಕೊನೆ ಯಾವಾಗ ಬರುವುದೋ ಗೊತ್ತಿಲ್ಲ. ಆದರೆ ರಕ್ತ ಬೀಜಾಸುರರ ಥರ ಒಂದಾದ ನಂತರ ಮತ್ತೊಬ್ಬರಂತೆ ಹುಟ್ಟಿಕೊಳ್ಳುತ್ತಿರುವ ಕಾಮಾಂಧರ ಕೃತ್ಯಗಳಿಗೆ ಬ್ರೇಕ್ ಹಾಕೋ ಅಸ್ತ್ರ ಅಂದ್ರೆ ಒಂದು ಕಾನೂನು. ಇನ್ನೊಂದು ಸಮಾಜ ಮಾತ್ರ. ಹಾಗಾಗಿ ಸಮಾಜ ಬದಲಾಗಲಿ. ನೋಡುವ ಹಳದಿ ಕಣ್ಣುಗಳು ತಿಳಿಯಾಗಲಿ ಅನ್ನೋದು ಪ್ರತೀ ಹೆಣ್ಣಿನ ಹೆಬ್ಬಯಕೆ.
ಕ್ಷಮಾ ಭಾರದ್ವಾಜ್