Connect with us

ಶಾಸಕ ಬಾವಾರ ವಿಲಾಸಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್

ಶಾಸಕ ಬಾವಾರ ವಿಲಾಸಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಖರೀದಿಸಿರುವ ವೋಲ್ವೊ ಎಕ್ಸ್ ಸಿ 90 ಹೈಬ್ರಿಡ್ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪರಿಣಾಮ ಕೆಲವು ಕಾಲ ಗದ್ದಲ ಏರ್ಪಟ್ಟ ಘಟನೆ ಸೋಮವಾರ ರಾತ್ರಿ ಶಿವಭಾಗ್ ಪೆಟ್ರೋಲ್ ಪಂಪ್‍ನಲ್ಲಿ ನಡೆದಿದೆ.

ಮೊಯ್ದಿನ್ ಬಾವ ಅವರ ಪುತ್ರ ಮೆಹಸೂಬ್ ಪೆಟ್ರೋಲ್ ಹಾಕಲು ಕದ್ರಿಯ ಬಂಕ್‍ಗೆ ತಂದಿದ್ದಾರೆ. ಆದರೆ ಬಂಕ್ ನಿರ್ವಾಹಕ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ್ದಾನೆ. ಎಡವಟ್ಟಿನ ಬಳಿಕ ಹೌಹಾರಿದ ಬಾವ ಪುತ್ರ ಮತ್ತು ಬಂಕ್‍ನವರಿಗೆ ವಾಗ್ವಾದ ನಡೆದಿದೆ. ಕೊನೆಗೆ ಬಂಕ್ ಮಾಲೀಕರು ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಈಗ ಕಾರು ಎಲ್ಲಿದೆ?
ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಕಾರಣ ಕಾರಿನ ಎಂಜಿನ್‍ಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಕಾರನ್ನು ಬಂಕ್‍ನಲ್ಲಿ ಪಾರ್ಕ್ ಮಾಡಲಾಗಿತ್ತು. ವೋಲ್ವೋ ಸರ್ವೀಸ್ ಸೆಂಟರ್ ಮಂಗಳೂರಿನಲ್ಲಿ ಇಲ್ಲದ ಕಾರಣ ಬೆಂಗಳೂರಿನ ಡೀಲರ್‍ಗೆ ಮಾಹಿತಿ ಕೊಟ್ಟಿದ್ದು ವೋಲ್ವೋ ಕಂಪನಿಯ ಮೆಕ್ಯಾನಿಕ್‍ಗಳು ನಗರಕ್ಕೆ ಆಗಮಿಸಿ, ಈಗ ಕಾರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಶೋರೂಂನಲ್ಲಿ ರಿಪೇರಿಯಾದ ಬಳಿಕ ವೋಲ್ವೋ ಕಂಪೆನಿ ಕಾರನ್ನು ಮೊಯ್ದಿನ್ ಬಾವರಿಗೆ ನೀಡಲಿದೆ.

ಬೆಲೆ ಎಷ್ಟು?
ಪೆಟ್ರೋಲ್ ಹಾಗೂ ಬ್ಯಾಟರಿ ಎರಡರಲ್ಲೂ ಚಲಿಸುವ ಕಾರಿನ ಬೆಲೆ 1.5 ಕೋಟಿ ರೂ. ಆಗಿದ್ದು, ಭಾರತದಲ್ಲಿ ಇಂತಹ ಕಾರನ್ನು ಮೊದಲ ಬಾರಿಗೆ ವೋಲ್ವೋ ಪರಿಚಯಿಸಿದೆ. ಕೆಲ ದಿನ ಹಿಂದೆಯಷ್ಟೇ ವೋಲ್ವೋ ಹೈಬ್ರಿಡ್ ಕಾರನ್ನು ಶಾಸಕ ಬಾವ ಖರೀದಿಸಿದ್ದರು. ಈ ಮೂಲಕ ಭಾರತದ ಮೊದಲ ಗ್ರಾಹಕ ಎಂಬ ಹೆಸರಿಗೆ ಶಾಸಕ ಮೊಯ್ದಿನ್ ಬಾವ ಭಾಜನರಾಗಿದ್ದರು.

ಮೈಲೇಜ್ ಎಷ್ಟು ನೀಡುತ್ತೆ?
ಈ ಕಾರು ಒಂದು ಲೀಟರ್ ಪೆಟ್ರೋಲ್‍ಗೆ ನಗರದಲ್ಲಿ 35 ಕಿಮೀ ನೀಡಿದರೆ, ಹೈವೇಯಲ್ಲಿ 40 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಆಟೋಮೊಬೈಲ್ ವೆಬ್‍ಸೈಟ್‍ಗಳು ಪ್ರಕಟಿಸಿವೆ.1969 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಈ ಕಾರು 225ಬಿಎಚ್‍ಪಿ ಮತ್ತು 4250 ಎನ್‍ಪಿ ಟಾರ್ಕ್ ಶಕ್ತಿ ಉತ್ಪಾದಿಸಬಲ್ಲುದು.

 

Advertisement
Advertisement