ಧಾರವಾಡ: ಉಪವಾಸ, ಕಾಣಿಕೆ ಇತ್ಯಾದಿಗಳ ರೂಪದಲ್ಲಿ ಜನ ಹರಕೆಯನ್ನು ಮಾಡಿಕೊಂಡು ನೆರೆವೇರಿಸುತ್ತಾರೆ. ಆದರೆ ಚಿಕ್ಕ ಮಕ್ಕಳನ್ನು ಬೆಂಕಿಯ ಮೇಲೆ ಮಲಗಿಸಿ ಹರಕೆ ತೀರಿಸುವ ವಿಶೇಷ ಹರಕೆಯೊಂದು ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ನಡೆದುಕೊಂಡು ಬರುತ್ತಿದೆ.
ಅಲ್ಲಾಪೂರ ಗ್ರಾಮದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ವಿಶೇಷ ಆಚರಣೆಯಲ್ಲಿ ಎಳೆಯ ಮಕ್ಕಳನ್ನು ಬೆಂಕಿಯ ಮೇಲೆ ಬಾಳೆ ಎಲೆಯನ್ನು ಇಟ್ಟು ಮಲಗಿಸುತ್ತಾರೆ. ನಂತರ ಎರಡು ಮೂರು ನಿಮಿಷ ಆದ ಮೇಲೆ ಮಕ್ಕಳನ್ನು ಹೊರ ತೆಗೆಯುತ್ತಾರೆ. ಚಿಕ್ಕ ಮಕ್ಕಳಿಗೆ ಯಾವುದೇ ದುಷ್ಟ ಶಕ್ತಿ ಕಾಡದೇ ಇರಲು ಈ ವಿಶಿಷ್ಟ ಹರಕೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರತಿ ವರ್ಷವೂ ಇಲ್ಲಿ ನಡೆಯುವ ಈ ಆಚರಣೆಗೆ ದೂರದ ಬೇರೆ ಬೇರೆ ಗ್ರಾಮಗಳಿಂದ ಜನರು ಹರಕೆ ಹೊತ್ತು ಬರುತ್ತಾರೆ. ಹಬ್ಬಕ್ಕೆ ಬಂದು ನಿಗಿ ನಿಗಿ ಕೆಂಡದ ಮೇಲೆ ಮಕ್ಕಳನ್ನು ಮಲಗಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ.
ಕಳೆದ ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದು, ದೇವರ ಪವಾಡದಿಂದ ಇದುವರೆಗೂ ಯಾವುದೇ ಮಕ್ಕಳಿಗೂ ಅನಾಹುತ ಸಂಭವಿಸಿಲ್ಲ ಎಂದು ಭಕ್ತರು ಹೇಳಿದ್ದಾರೆ.