Dakshina KannadaDistrictsKarnatakaLatestMain PostMost SharedSports

ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

Advertisements

ಮಂಗಳೂರು: ಕಾವ್ಯಳನ್ನು ಯಾರೀ ಕೊಲೆ ಮಾಡಿಲ್ಲ. ನಮ್ಮ ಸಂಸ್ಥೆಯ ಮೇಲೆ ಬಂದಿರುವ ಆರೋಪಗಳು ಎಲ್ಲವೂ ಸುಳ್ಳು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದಾರೆ.

ಕ್ರೀಡಾ ಕೋಟದಡಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ್ದ ಕಟೀಲು ನಿವಾಸಿ ಕಾವ್ಯಾ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇಲ್ಲಿ ಆಗುತ್ತಿರುವ ಚರ್ಚೆಗಳು ಯಾವುದು ಸತ್ಯ ಅಲ್ಲ. ಇದನ್ನು ಖಂಡಿತಾ ನಾನು ಒಪ್ಪಲ್ಲ. ನಾನು ಒಬ್ಬ ಜವಾಬ್ದಾರಿಯುತನಾಗಿ ಹೇಳ್ತಾ ಇದ್ದೇನೆ. ಯಾಕಂದ್ರೆ ಇಲ್ಲಿ ನನಗೆ ತುಂಬಾ ಜವಾಬ್ದಾರಿ ಇದೆ. ನನ್ನ ನಂಬಿಕೊಂಡು ಇಡೀ ರಾಜ್ಯದ 26,000 ಮಕ್ಕಳು ಆಳ್ವಾಸ್ ಸಂಸ್ಥೆಯೊಳಗಿದ್ದಾರೆ. ಬಹಳ ದೀರ್ಘ ಕಾಲದಲ್ಲಿ ಕಟ್ಟಿದಂತಹ ಒಂದು ಸಂಸ್ಥೆ. ಇಂತಹ ಸಂಸ್ಥೆಯ ಜವಾಬ್ದಾರಿಯುತ ನಾಗರಿಕನಾಗಿ ನಾನು ಹೆಳ್ತೀನಿ. ಇದು ಆ ದಿವಸ ಹಾಸ್ಟೆಲ್ ಗೆ ಮಕ್ಕಳು ಬರುವಾಗ ಈ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಅಂತ ಹೇಳಿದ್ದಾರೆ.

ಇವಳು ನೇಣು ಹಾಕೊಂಡು ನೇತಾಡ್ತಾ ಇರೋದನ್ನು ನೋಡಿದ ಆಕೆಯ ರೂಮೆಟ್ಸ್ ಗಳೇ ಅವಳ ದೇಹವನ್ನು ಕೆಳಗಿಳಿಸಿದ್ದಾರೆ. ಬಳಿಕ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಈ ವೇಳೆ ಆಕೆಗೆ ಉಸಿರಾಟ ಇತ್ತೋ ಇಲ್ಲವೋ ಅನ್ನೋದರ ಬಗ್ಗೆ ನನಗೆ ಮಾಹಿತಿಯಿಲ್ಲ. ಆಸ್ಪತ್ರೆಗೆ ಆಕೆಯ ಪೋಷಕರು ಹಾಗೂ ಪೊಲೀಸ್ ಇಲಾಖೆಯವರು ಬಂದ್ರು. ಆಕೆಯ ದೇಹದ ಮೊಹಜರು ಒಂದು ಮುಕ್ಕಾಲು ಗಂಟೆಯಲ್ಲಿ ಆಗಿ ಅವರ ಮನೆಗೆ ತೆರಳಿದರು. ನಾವು ಈ ಕಡೆ ಬಂದ್ವಿ ಅಂದ್ರು.

ಹೀಗಾಗಿ ಇಲ್ಲಿ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗಳಿಗೆ ಮೋಹನ್ ಆಳ್ವ ಅವರು ನೀಡಿದ ಉತ್ತರಗಳನ್ನು ನೀಡಲಾಗಿದೆ.

* ನಾವು ಆಸ್ಪತ್ರೆಗೆ ಹೋಗುವ ಮುನ್ನವೇ ಮಗಳ ದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು ಅಂತಾ ಪೋಷಕರು ಹೇಳ್ತಾ ಇದ್ದಾರೆ. ಹೀಗಾಗಿ ಪೋಷಕರ ಅನುಮತಿಯಿಲ್ಲದೇ ಹೇಗೆ ಶವಾಗಾರದಲ್ಲಿ ಇಟ್ರಿ?
ಆಸ್ಪತ್ರೆಯ ಎಮರ್ಜೆನ್ಸಿ ಜಾಗದಲ್ಲಿ ನಾವು ಎಷ್ಟು ಹೊತ್ತು ಶವವನ್ನು ಇಟ್ಟುಕೊಳ್ಳಬಹುದು?. ಹೀಗಾಗಿ ಪೊಲೀಸ್ ಇಲಾಖೆಯವರ ಜೊತೆ ಮಾತನಾಡಿಯೇ ಕಾವ್ಯಾ ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು.

* ಶವದ ಮುಖವನ್ನು ಬಿಟ್ಟು ಇಡೀ ದೇಹದ ಯಾವುದೇ ಭಾಗವನ್ನು ನೋಡಲು ಸಾಧ್ಯವಾಗಿಲ್ಲ ನಮಗೆ ಅಂತ ಪೋಷಕರು ಹೇಳ್ತಾ ಇದ್ದಾರೆ.
ಆಕೆಯ ಶವದಲ್ಲಿ ಒಂದು ಸಣ್ಣ ಗಾಯವಿಲ್ಲ. ಇದಕ್ಕೊಂದು ಅರ್ಥವಿದೆಯಾ?. ನೀವು ಬೇಕಾದ್ರೆ ನಮ್ಮ ಮೂಡಬಿದರೆ ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಕೇಳಿ. ಯಾಕಂದ್ರೆ ಆಕೆಯನ್ನು ಯಾರು ಕೊಲೆ ಮಾಡಬೇಕು? ಯಾಕೆ ಕೊಲೆ ಮಾಡ್ಬೇಕು? ಅಂತಾ ಹೇಳಿದ್ರು.

* ಶಿಕ್ಷಣ ಸಂಸ್ಥೆಯಲ್ಲಿ ಬೆಳಗ್ಗಿನ ಜಾವ 4.15ಕ್ಕೆ ಯಾವುದಾದರೂ ಪ್ರಾಕ್ಟಿಸ್ ಇತ್ತಾ?
ನೂರಕ್ಕೆ ನೂರು ಪರ್ಸೆಂಟ್ ಯಾವುದೇ ಪ್ರಾಕ್ಟೀಸ್ ಇಲ್ಲ. ಆಕೆ ತಪ್ಪು ತಿಳಿದುಕೊಂಡಿರಬಹುದು. ನಾಲ್ಕು ಕಾಲು ಗಂಟೆಗೆ ಯಾವುದೇ ಪ್ರಾಕ್ಟೀಸ್ ಗಳು ಶಿಕ್ಷಣ ಸಂಸ್ಥೆಯಲ್ಲಿ ನಡೆಯಲ್ಲ. ಈಗಾಗಲೇ 800 ಮಂದಿ ಕ್ರೀಡಾ ವಿದ್ಯಾರ್ಥಿಗಳು ಇದ್ದಾರೆ. ಆದ್ರೆ ಈಕೆ ಬಂದು 1 ತಿಂಗಳಾಗಿದ್ದು. ಇದು ಕಳೆದ 35 ವರ್ಷಗಳಿಂದ ನಡೆಯುವ ಕ್ರೀಡಾ ವಿಚಾರ. ಉಚಿತ ಶಿಕ್ಷಣದಲ್ಲಿ 800 ಮಕ್ಕಳಿದ್ದಾರೆ. ಈಕೆ ಕೂಡ ಉಚಿತ ಶಿಕ್ಷಣದಲ್ಲೇ ನಮ್ಮ ಸಂಸ್ಥೆಗೆ ಸೇರಿದವಳು. ಒಟ್ಟಾರೆ ಬೆಳಗ್ಗಿನ 6 ಗಂಟೆಯವರೆಗೆ ಯಾವುದೇ ಪ್ರಾಕ್ಟೀಸ್ ಗಳು ನಡೆಯಲ್ಲ. ಸಂಸ್ಥೆಯ ಬಸ್ ನಲ್ಲೇ ಈಕೆ 5.30 ಗಂಟೆಗೆ ಗ್ರೌಂಡ್ ಗೆ ಹೋಗ್ತಾಳೆ.

* ಹಲವಾರು ಪ್ರಕರಣಗಳಲ್ಲಿ ಹಾಸ್ಟೇಲ್ ಒಳಗೆ ಸೀರೆಯ ನೇಣು ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ಮಕ್ಕಳಿಗೆ ಸೀರೆ ಎಲ್ಲಿಂದ ಸಿಗತ್ತೆ?
ಕಾವ್ಯಾ ಪ್ರಕರಣದಲ್ಲಿ ಆಕೆಯ ಪಕ್ಕದ ರೂಮಿಗೆ ವಿದ್ಯಾರ್ಥಿನಿಯರ ಪೋಷಕರು ಬಂದಿದ್ದರಂತೆ. ಅವರ ಸೀರೆ ಅಲ್ಲಿ ಇತ್ತಂತೆ. ಅದನ್ನು ತೆಗೆದುಕೊಂಡು ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

* ಮೃತ ದೇಹ ಟ್ರ್ಯಾಕ್ ಶೂಟ್ ನಲ್ಲಿತ್ತು. ಹಾಗಿದ್ರೆ 4.15ಕ್ಕೆ ಗ್ರೌಂಡ್ ಹೋಗಿಲ್ಲ. ಮೊದಲನೇ ದಿನ ಪೋಷಕರ ಜೊತೆ ಚೆನ್ನಾಗಿಯೇ ಮಾತನಾಡಿದ್ದಾಳೆ. ಹಾಗಾದ್ರೆ ಆಕೆ ನೇಣು ಹಾಕಿಕೊಂಡಿರೋದು ಬೆಳಗ್ಗೆನಾ ಅಥವಾ ಸಂಜೆಯಾ?
ಆಕೆ ಬಾಯಿ ತಪ್ಪಿ ಮುಂಜಾನೆ 4.15 ಗಂಟೆಗೆ ಪ್ರಾಕ್ಟೀಸ್ ಇದೆ ಅಂತ ಹೇಳಿರಬೇಕು. ನಿಜ ಹೇಳ್ತಾ ಇದ್ದೀನಿ.. ಆಕೆ ಬೆಳಗ್ಗೆ 6 ಗಂಟೆಗೆ ಪ್ರಾಕ್ಟೀಸ್ ಗೆ ಹೋಗಿದ್ದಾಳೆ. 7.30 ವರೆಗೆ ಪ್ರಾಕ್ಟೀಸ್ ಮಾಡಿದ್ದಾಳೆ. ಅಲ್ಲಿಂದ ಬಸ್ ಹತ್ತಿ ಬಂದು ನಂತ್ರ ಶಾಲೆಗೆ ಹೋಗಿದ್ದಾಳೆ. ತರಗತಿಯಲ್ಲಿ ಕುಳಿತಿದ್ದಾಳೆ. ಮೂರೂವರೆ ಗಂಟೆವರೆಗೆ ಕ್ಲಾಸ್ ನಡೆದಿತ್ತು. ತದನಂತ್ರ ಮೂರು ಮುಕ್ಕಾಲಿಗೆ ನಮ್ಮ ಬಸ್ ನಲ್ಲಿ ಬಂದು ಇಳಿದಿದ್ದಾಳೆ. ಅಲ್ಲಿವರೆಗೆ ನಮ್ಮಲ್ಲಿ ವಿಡಿಯೋ ಇದೆ. ಹೀಗಾಗಿ ಏನಿದು ಬೆಳಗ್ಗೆ ಮರ್ಡರ್ ಆಗಿದ್ದಳೋ ಅಥವಾ ಸಂಜೆನೋ ಸುಮ್ನೆ ಯಾಕೆ ಈ ತರದ ಪ್ರಶ್ನೆಗಳು. ಹಾಗಿದ್ದರೆ ಇಲ್ಲಿ ಇದ್ದಿದೆಲ್ಲಾ ಸುಳ್ಳಾ? ನಮ್ಮ ಕ್ಯಾಂಪಸ್ ನಲ್ಲಿ ಎಲ್ಲಿಯಾದ್ರೂ ಒಂದು ಮರ್ಡರ್ ಆದ್ರೆ ನಮ್ಮ ಮಕ್ಕಳು ಬಿಟ್ಟರಾ?

* ರಾಜ್ಯದ ಬೇರೆ ಬೇರೆ ಕಡೆಯಿಂದ ಸಂಸ್ಥೆಗೆ ಶಿಕ್ಷಣಕ್ಕಾಗಿ ಬರ್ತಾರೆ. ಅವರ ಹೆತ್ತವರು ಕೂಡ ಮಕ್ಕಳ ಬಗ್ಗೆ ಏನೇನೋ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಿದ್ರೆ ಮಕ್ಕಳ ಮನಸ್ಸು ಕುಗ್ಗಿ ಈ ತರದ ಯೋಚನೆಗಳು ಬರಲು ಕಾರಣವೇನಿರಬಹುದು?
ಕಾವ್ಯಾಳ ಯಾವುದೇ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಅವಳು ಸರಿಯಾಗಿಯೇ ಇದ್ದಳು. ಪ್ರಾಕ್ಟೀಸ್ ಕೂಡ ಮಾಡ್ತಾ ಇದ್ದಳು. ಹೀಗಾಗಿ ಬಂದು 1 ತಿಂಗಳು 8 ದಿನಗಳಾದ್ರೂ ಆಕೆಯ ಬಗ್ಗೆ ಯಾವುದೇ ರೀತಿಯ ದೂರುಗಳಿರಲಿಲ್ಲ. 10ನೇ ತರಗತಿಯಲ್ಲಿ ಒದುತ್ತಾ ಇದ್ದಳು. ಹೀಗಾಗಿ ಸುಮ್ನೆ ಎಂತೆಂಥಾ ಅಪವಾದಗಳನ್ನು ಆಕೆಯ ಮೇಲೆ ಹಾಕಲು ನಾನು ತಯಾರಿಲ್ಲ. ಕಲಿಯುವುದರಲ್ಲೂ ಸಾಧಾರಣ ಇದ್ದಳು. ಕ್ರೀಡೆಯಲ್ಲಿ ಆಸಕ್ತಿ ಇರೋ ಮಕ್ಕಳು ಮೊದಲು ಕಲಿಯುವ ಕಡೆ ಅಷ್ಟೊಂದು ಗಮನ ಹರಿಸಲ್ಲ. ಹೋಗ್ತಾ ಹೋಗ್ತಾ ಅವರ ಕಲಿಯುವಿಕೆಯು ಇಂಪ್ರೂ ಆಗತ್ತೆ.

* ಹಾಗಿದ್ರೆ ಒಬ್ಬಳು ಕ್ರೀಡಾ ವಿದ್ಯಾರ್ಥಿನಿಯಾಗಿ ಕೇವಲ ಅರ್ಧ ಅಂಕಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಅಂತಾ ನಿಮಗೆ ಅನಿಸ್ತಿದೆಯೇ?
ನನಗೆ ಗೊತ್ತಿಲ್ಲ. ಯಾಕಂದ್ರೆ ಒಬ್ಬರು ಕ್ರೀಡಾ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಅವರು ಅನ್ ಫಿಟ್ ಫಾರ್ ಸ್ಪೋರ್ಟ್ಸ್. ಸ್ಪೋರ್ಟ್ಸ್ ಮ್ಯಾನ್ ಗಳಿಗೆ ಇರೋದೇ ಕ್ರೀಡಾ ಮನೋಭಾವ. ಹೀಗಾಗಿ ನನಗೆ ಅಚ್ಚರಿಯಾಗ್ತಾ ಇದೆ. ಯಾಕೆ ಆಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ. ಯಾಕೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬುವುದೇ ನನಗೂ ಸಪ್ರೈಸ್ ಅಷ್ಟೇ. ಸ್ಪೋರ್ಟ್ಸ್ ಇಷ್ಟ ಇಲ್ಲ ಅಂತಂದ್ರೆ ನಾವು ಆಕೆಯನ್ನು ಕಳಿಸಿಕೊಡ್ತಾ ಇದ್ವಿ.

ಆಕೆಯ ಸಹಪಾಠಿಗಳನ್ನು ಮಾತನಾಡಿಸಿದಾಗ, ಆಕೆ ಚೆನ್ನಾಗಿಯೇ ಇದ್ದಳು. ಅಮ್ಮ ಶನಿವಾರ ಬರ್ತಾರೆ. ನನಗೆ ಸ್ವಲ್ಪ ಅಂಕ ಕಡಿಮೆ ಇದೆ. ಮುಂದೆ ಒಳ್ಳೆಯ ಅಂಕಗಳನ್ನು ಗಳಿಸಬೇಕು ಅಂತ ಹೇಳಿದ್ದಳಂತೆ. ಅಲ್ಲದೇ ಒಂದು ದಿನ ರೂಮಿನ ಫ್ಯಾನ್ ಚೆನ್ನಾಗಿ ಇದೆ. ಈ ಫ್ಯಾನ್ ಎಲ್ಲಿದ್ದು? ಯಾವ ಕಂಪನಿಯದ್ದು ಅಂತೆಲ್ಲ ಪ್ರಶ್ನೆಗಳನ್ನು ಕೇಳಿದ್ದಳಂತೆ. ಕೊನೆಯದಾಗಿ ಯಾವಾಗಲೂ ಸುಳ್ಳು ಸುಳ್ಳೇ. ಸತ್ಯ ಸತ್ಯವೇ. ಯಾವತ್ತೂ ನಾನು ಸತ್ಯದ ಹಿಂದೆ ಇದ್ದೇನೆ. ಊಹಾಪೋಹಗಳು ಆಗಬಾರದು. ವದಂತಿ ಬೇರೆ. ಅತ್ಯ ಬೇರೆ. ಅನಗತ್ಯ ವದಂತಿಗಳು ಬರಬಾರದು. ಪೋಷಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಕಾವ್ಯಾ ಪ್ರಕರಣದಲ್ಲಿ ನಾನು ಯಾವ ತನಿಖೆಗೂ ಸಿದ್ಧನಾಗಿದ್ದೇನೆ ಅಂದ್ರು.

ರೋಬಾರ್ಟ್ ರೊಸಾರಿಯೋ ವಿರುದ್ಧ ಕಿಡಿ: ಈ ವೇಳೆ ರೋಬಾರ್ಟ್ ರೊಸಾರಿಯೋ ಅವರು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ಜೊತೆ ಮಾತನಾಡಿದಾಗ, ನಾನು ನೀವು ಮಾಡೋ ತನಿಖೆಗೆ ಸಿದ್ದನಿಲ್ಲ. ನಿಮ್ಮ ಜೊತೆ ಮಾತನಾಡುವ ಆಸೆ ನನಗಿಲ್ಲ. ನೀವು ಯಾರು ಇದನ್ನು ಕೇಳಲು. ನಿಮಗೆ ಸ್ಪಷ್ಟೀಕರಣ ಕೊಡಲು ನಾನು ಸಿದ್ದನಿಲ್ಲವೆಂದು ಹೇಳಿ ಮೋಹನ್ ಆಳ್ವ ಫೋನ್ ಕಾಲ್ ಕಟ್ ಮಾಡಿದ್ರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಕಾವ್ಯಾ ಪೂಜಾರಿ ಒಬ್ಬಳು ಒಳ್ಳೆಯ ಕ್ರೀಡಾ ವಿದ್ಯಾರ್ಥಿನಿ. ಆಕೆ ಮಾನಸಿಕವಾಗಿ ನೊಂದಿರುವ ಬಗ್ಗೆ ಒಂದು ಸಣ್ಣ ಮಾಹಿತಿ ತಿಳಿಯುತ್ತಿದ್ರೆ ನಾನು ಆಕೆಗೆ ಕೌನ್ಸಿಲಿಂಗ್ ಆದ್ರೂ ಮಾಡಿ ಸಂತೈಸುತ್ತಿದ್ದೆ. ಬೆಳಗ್ಗೆ 6 ಗಂಟೆಗೆ ಆಕೆ ಅಭ್ಯಾಸಕ್ಕೆ ಬಂದವಳು 8 ಗಂಟೆಯವರೆಗೆ ಇದ್ದಳು. ಸಂಜೆ 4/15ಕ್ಕೆ ಪ್ರಾಕ್ಟೀಸ್ ಇತ್ತು. ಆದ್ರೆ ಆಕೆ ಬಂದಿರಲಿಲ್ಲ. ಆಕೆಗೆ ಸ್ಪೆಷಲ್ ಕ್ಲಾಸ್ ಇದೆ. ಹೀಗಾಗಿ ನಾನು ಪ್ರಾಕ್ಟೀಸ್ ಗೆ ಬರೋವಾಗ ಲೇಟಾಗಬಹುದು ಅಂತ ಆಕೆಯ ಸೀನಿಯರ್ಸ್ ಹೇಳಿದ್ರು. ಆದ್ರೆ ಆ ದಿನ ಆಕೆ ಪ್ರಾಕ್ಟೀಸ್ ಗೆ ಬಂದಿಲ್ಲ. ಬಳಿಕ ಆಕೆಯ ರೂಮೆಟ್ಸ್ ಗಳು 7- 7.20 ಗಂಟೆಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಅಂತ ಹೇಳಿದ್ರು.

ಒಟ್ಟಿನಲ್ಲಿ ಆಕೆಯ ಸಹಪಾಠಿಗಳು ಆಕೆಗೆ ಕಡಿಮೆ ಮಾರ್ಕ್ ಬಂದಿದೆ. ಹೀಗಾಗಿ ಶನಿವಾರ ಅಮ್ಮ ಬರ್ತಾರೆ ಅಂತಾ ಬೇಜಾರು ಮಾಡಿಕೊಂಡಿದ್ದಳು ಅಂತ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಪುತ್ರಿ ಕಾವ್ಯಾ(15) ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದು, ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು.

ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು. ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.

https://www.youtube.com/watch?v=O1dTEqQsZ80

https://www.youtube.com/watch?v=BgvrrloxXoQ&spfreload=10

https://www.youtube.com/watch?v=9upWi0NOWqw

Leave a Reply

Your email address will not be published.

Back to top button