ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಅಮೆರಿಕ ವೀಸಾ ನಿರಾಕರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಮಿ ವಿರುದ್ಧ ಐಪಿಸಿ ಸೆಕ್ಷನ್ 498 ಎ ಅಡಿ ಕೌಟುಂಬಿಕ ದೌರ್ಜನ್ಯ ಮತ್ತು 654ಎ ಲೈಂಗಿಕ ದೌರ್ಜನ್ಯದ ಅಡಿ ದಾಖಲಿರುವ ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಅಮೆರಿಕ ರಾಯಭಾರಿ ವೀಸಾ ನೀಡಲು ನಿರಾಕರಿಸಲಾಗಿದೆ. 2018 ರಲ್ಲಿ ಶಮಿ ಪತ್ನಿ ಜಹಾನ್ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈಗಾಗಲೇ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಶಮಿಗೆ ವೀಸಾ ನಿರಾಕರಿಸುತ್ತಿದಂತೆಯೇ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ ಅಮೆರಿಕಾ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ. ಟೀಂ ಇಂಡಿಯಾ ಪರ ಶಮಿ ವಿಶ್ವಕಪ್ ಸೇರಿದಂತೆ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಪಿ ಒನ್ ವಿಭಾಗದ ಅನ್ವಯ ಅಂತರಾಷ್ಟ್ರಿಯ ಆಟಗಾರನಾಗಿ ಗುರುತಿಸಿ ವೀಸಾ ನೀಡಲು ಮನವಿ ಮಾಡಿದ್ದಾರೆ. ಆ ಬಳಿಕವೇ ಅಮೆರಿಕ ರಾಯಭಾರಿ ಕಚೇರಿ ವೀಸಾ ನೀಡಿದೆ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.