ಜಮ್ಮು-ಕಾಶ್ಮೀರಕ್ಕಿಂದು ಮೋದಿ ಭೇಟಿ – 30,000 ಕಾರ್ಯಕರ್ತರನ್ನುದ್ದೇಶಿಸಿ ಭಾಷಣ

Public TV
2 Min Read
Narendra Modi 1

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ (Jammu and Kashmir Assembly Election) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು (ಸೆ.19) ಶ್ರೀನಗರದ ಶೇರ್ ಇ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬುಧವಾರ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಬಹುಭದ್ರತೆಯ ನಡುವೆ ಪ್ರಧಾನಿ ಮೋದಿ ಗುರುವಾರ ಶ್ರೀನಗರದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಇದನ್ನೂ ಓದಿ: ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

ಶ್ರೀನಗರದ ಶೇರ್ ಇ ಕಾಶ್ಮೀರ ಪಾರ್ಕ್‌ನಲ್ಲಿ (Sher-e-Kashmir Park) ರ‍್ಯಾಲಿ ನಡೆಯಲಿದ್ದು, ಪಕ್ಷದ 30 ಸಾವಿರ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸುವ ಸಾಧ್ಯತೆಯಿದೆ. ಬಿಜೆಪಿ ಪ್ರಚಾರದ ಭಾಗವಾಗಿ ಈ ರ‍್ಯಾಲಿ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.

ಈ ಸಂಬಂಧ ಬಿಜೆಪಿ ನಾಯಕ ಅಲ್ತಾಫ್ ಠಾಕೂರ್ (Altaf Thakur) ಮಾತನಾಡಿ, ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ, 19 ಅಭ್ಯರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲಿದೆ ಎಂದು ತಿಳಿಸಿದರು.

ಈ ಬಾರಿಯ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಕಾಶ್ಮೀರದ 45 ಸ್ಥಾನಗಳ ಪೈಕಿ 19 ಕ್ಷೇತ್ರಗಳಲ್ಲಿ ಬಿಜೆಪಿ (BJP)ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 2014ರ ಚುನಾವಣೆಗಿಂತ ಈ ಬಾರಿ ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಇದನ್ನೂ ಓದಿ: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಬುಧವಾರ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದ ಮತದಾನದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಇನ್ನೂ ಎರಡು ಹಂತಗಳಲ್ಲಿ ಮತದಾನ ಬಾಕಿಯಿದ್ದು, ಸೆ.25 ಹಾಗೂ ಅ.1 ರಂದು ಮತದಾನ ನಡೆಯಲಿದೆ. ಅ.8 ರಂದು ಮತ ಎಣಿಕೆ ನಡೆಯಲಿದೆ.

Share This Article