ಉಡುಪಿ: ಕಾಶ್ಮೀರ ವಿಭಜನೆ ಹಾಗೂ ಬ್ಯಾಂಕ್ ವಿಲೀನ ಪ್ರಧಾನಿ ನರೇಂದ್ರ ಮೋದಿಯವರ ಆತುರದ ನಿರ್ಧಾರವಾಗಿವೆ. ರಾತ್ರಿ ನಿರ್ಧಾರ ಮಾಡುತ್ತಾರೆ, ಬೆಳಗ್ಗೆ ಘೋಷಣೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆ ಬ್ಯಾಂಕ್‍ಗಳ ತೊಟ್ಟಿಲು. ಅವಿಭಜಿತ ಜಿಲ್ಲೆಗಳು ನಾಲ್ಕು ಬ್ಯಾಂಕ್‍ಗಳ ತವರು. ವಿಜಯ ಬ್ಯಾಂಕ್ ವಿಲೀನ ಆಯ್ತು ಈಗ ಕೆನರಾ, ಸಿಂಡಿಕೇಟ್, ಕಾರ್ಪೋರೇಷನ್ ಬ್ಯಾಂಕ್ ಸರದಿ. ಬ್ಯಾಂಕ್ ವಿಲೀನದ ಸಾಧಕ ಬಾಧಕ ಕುರಿತು ಚರ್ಚೆ ಮಾಡಿಲ್ಲ. ಈ ಎಲ್ಲ ಬ್ಯಾಂಕ್‍ಗಳಿಗೂ ಒಂದು ಅಸ್ಮಿತೆ ಇದೆ. ಬಡ ಜನರಿಗೆ ಸೇವೆ ಕೊಡುವ ಉದ್ದೇಶದಿಂದ ಆರಂಭವಾದ ಬ್ಯಾಂಕ್‍ಗಳನ್ನು ಜನರಿಂದ ದೂರ ಕೊಂಡೊಯ್ಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ವಿಲೀನ ಮಾಡುವ ಮೂಲಕ ದೊಡ್ಡ ಬ್ಯಾಂಕ್ ಮಾಡುತ್ತೇವೆ ಎನ್ನುತ್ತಾರೆ. ಈ ಬ್ಯಾಂಕ್‍ಗಳು ಇನ್ನು ಹಳ್ಳಿಗರಿಗೆ ತಲುಪುವುದಿಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದ್ದಾರೆ. ನಮ್ಮ ಬ್ಯಾಂಕ್ ಗಳನ್ನು ಹೊರದೇಶದ ಬ್ಯಾಂಕ್ ಗಳಿಗೆ ವಿಲೀನ ಮಾಡುತ್ತಾರೆ. ಪವಿತ್ರವಾದ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆಯ ಬುನಾದಿ. ಇವತ್ತು ರಿಸರ್ವ್ ಫಂಡನ್ನೇ ಕೇಂದ್ರ ಪಡೆದಿದೆ. ಆರ್ಥಿಕ ತುರ್ತುಪರಿಸ್ಥಿತಿ ಇದ್ದಾಗ ಮಾತ್ರ ಹೀಗೆ ಮಾಡುತ್ತಾರೆ. ಈಗ ದೇಶದಲ್ಲಿ ಅಘೊಷಿತ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿದೆ. ವಿಲೀನ ನಿರ್ಧಾರದಿಂದ ಕರಾವಳಿಯ ಬ್ಯಾಂಕಿಂಗ್ ಚರಿತ್ರೆಗೆ ಧಕ್ಕೆಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
Advertisement
ಪ್ರವಾಹದಿಂದ 5 ಲಕ್ಷ ಕೋಟಿ ನಷ್ಟ
ಪ್ರವಾಹದಿಂದ ಆಗಿರುವ ನಷ್ಟ ಐವತ್ತು ಸಾವಿರ ಕೋಟಿ ಅಲ್ಲ, ರಾಜ್ಯದಲ್ಲಿ ಸುಮಾರು 5 ಲಕ್ಷ ಕೋಟಿ ರೂ. ನಷ್ಟವಾಗಿದೆ. ಐಎಎಸ್ ಅಧಿಕಾರಿಗಳ ನಿಯೋಗದಿಂದ ಪರಿಶೀಲನೆ ನಡೆಸಿ ಪ್ರಯೋಜನ ಇಲ್ಲ. ತಜ್ಞರ ಸಮಿತಿ ಮಾಡಬೇಕು. ಕೇಂದ್ರ ಸರ್ಕಾರ ಪ್ರವೇಶ ಆಗಬೇಕು. ಇವತ್ತಿನ ವರೆಗೆ ಕೇಂದ್ರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಪ್ರಧಾನಿ ಸೆಪ್ಟೆಂಬರ್ 7 ಕ್ಕೆ ರಾಜ್ಯಕ್ಕೆ ಬರುತ್ತಾರಂತೆ. ಅವರು ಬಂದು ಘೋಷಣೆ ಮಾಡಬೇಕು ಅಂತ ಏನಿದೆ? ಪರಿಹಾರ ಘೋಷಣೆಗೆ ಕಾಯುವುದು ಸರಿಯಲ್ಲ. ಗೃಹ ಸಚಿವರು ರಾಷ್ಟ್ರೀಯ ವಿಪತ್ತು ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅಮಿತ್ ಶಾ ರಾಜ್ಯದ ಸ್ಥಿತಿ ನೋಡಿದ್ದಾರೆ. ಹಾಗಿದ್ರೂ ಪರಿಹಾರ ಘೋಷಣೆಗೆ ವಿಳಂಬ ಯಾಕೆ? ಕೇಂದ್ರ ಮತ್ತು ರಾಜ್ಯ ಪ್ರವಾಹವನ್ನು ಸಾಮಾನ್ಯವೆಂಬಂತೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಸಿಎಂ ವಿರೋಧ ಪಕ್ಷದ ನಾಯಕರ ವಿಶ್ವಾಸ ಪಡೆದಿಲ್ಲ. ಪ್ರವಾಹದ ಕುರಿತು ಕರೆದು ಮಾತನಾಡಿಸಿಲ್ಲ. ಯಾವುದೇ ಅಭಿಪ್ರಾಯ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.