ನವದೆಹಲಿ: ಉತ್ತರ ಭಾರತದಲ್ಲಿ ಲೋಕ ಚುನಾವಣಾ ಅಬ್ಬರ ಜೋರಾಗುತ್ತಿದೆ. ದೇಶದ ಪುರಾತನ ನಗರ ವಾರಣಾಸಿಯಿಂದ ಪ್ರಧಾನಿ ಮೋದಿ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಇಂದು ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ದೇಶದ ಪ್ರಮುಖ ಪುಣ್ಯಕ್ಷೇತ್ರ, ಪುರಾತನ ನಗರ, ಪಾವನ ಧಾಮ ವಾರಣಾಸಿ. 2014ರ ಲೋಕಸಭೆ ಚುನಾವಣೆಯಲ್ಲಿ ವಡೋದರ ಮತ್ತು ವಾರಣಾಸಿಯಿಂದ ಕಣಕ್ಕೆ ಧುಮುಕಿದ್ದ ಮೋದಿ ಎರಡೂ ಕಡೆ ಭರ್ಜರಿಯಾಗಿ ಗೆದ್ದಿದ್ದರು. ನಂತರ ವಡೋದರಾ ಬಿಟ್ಟುಕೊಟ್ಟು ವಾರಣಾಸಿಯನ್ನು ಉಳಿಸಿಕೊಂಡಿದ್ದರು. ಈ ಬಾರಿ ಕೇವಲ ವಾರಣಾಸಿಯಿಂದ ಮಾತ್ರ ನರೇಂದ್ರ ಮೋದಿ ಕಣಕ್ಕೆ ಧುಮುಕಿದ್ದಾರೆ. ಹೀಗಾಗಿ ವಾರಣಾಸಿಯಲ್ಲಿ ಈಗ ಕಾಶಿ ವಿಶ್ವನಾಥನಿಗಿಂತ ಹೆಚ್ಚು ಮೋದಿಯೇ ಸದ್ದು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಇವತ್ತು ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
Advertisement
Advertisement
ಬಿಹಾರದಲ್ಲಿನ ಚುನಾವಣಾ ಪ್ರಚಾರದ ಬಳಿಕ ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಆಗಮಿಸಲಿದ್ದಾರೆ. ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆಯ ಬಳಿಕ ಅದ್ಧೂರಿ ರೋಡ್ ಶೋಗೆ ಚಾಲನೆ ನೀಡಲಿದ್ದಾರೆ. ಬಳಿಕ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್, ಗ್ವಾಡಾಲಿಯಾ ಮೂಲಕ ಸಾಗಲಿರುವ ರೋಡ್ ಶೋ ಅಶ್ವಮೇಧ್ ಘಾಟ್‍ನಲ್ಲಿ ಸಂಜೆ ಗಂಗಾರತಿಯೊಂದಿಗೆ ಅಂತ್ಯವಾಗಲಿದೆ.
Advertisement
ದೇಶವೇ ಬೆರಗುಗಣ್ಣಿನಿಂದ ನೋಡುತ್ತಿರುವ ವಾರಣಾಸಿಯಲ್ಲಿ ರೋಡ್ ಶೋ ಯಶಸ್ವಿಗೊಳಿಸಲು ಬಿಜೆಪಿ ಚಾಣಾಕ್ಯ ಅಮಿತ್ ಶಾ ಪ್ಲಾನ್ ರೂಪಿಸಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಳಿ ಆಹ್ವಾನಿಸುತ್ತಿದ್ದಾರೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿಗೆ ಅವಕಾಶ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
ರೋಡ್ ಶೋ ಬಳಿಕ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿಲಿದ್ದು, ಅದಕ್ಕೂ ಮುನ್ನ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಬಿಹಾರದ ಸಿಎಂ ನಿತಿಶ್ ಕುಮಾರ್, ರಾಮವಿಲಾಸ್ ಪಾಸ್ವಾನ್ ಸೇರಿದಂತೆ ಬಿಜೆಪಿ ಮತ್ತು ಎನ್‍ಡಿಎ ಒಕ್ಕೂಟದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಈ ಮೂಲಕ ವಾರಣಾಸಿ ಇವತ್ತು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ.