ಬೆಂಗಳೂರು: ಪ್ರಧಾನಿ ನರೇಂದ್ರ ಮೋದ್ರಿ ಅವರ ಕೃಪೆಯಿಂದ ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳೇ ಮಾಯವಾಗಿದ್ದು, ರಸ್ತೆಗಳೆಲ್ಲಾ ಥಳ ಥಳ ಎಂದು ಹೊಳೆಯುತ್ತಿವೆ.
ರಸ್ತೆ ಗುಂಡಿಗಳಲ್ಲಿ ಬಿದ್ದು ಐವರು ಸತ್ತರೂ ತಲೆಕೆಡಿಸಿಕೊಳ್ಳಿಲ್ಲ. ಜನರು ಯಮಗುಂಡಿ ರಸ್ತೆಗಳನ್ನು ಮುಚ್ಚಿ ಅಂತಾ ಕೇಳಿಕೊಂಡರು ಸರ್ಕಾರಕ್ಕೆ ಕಾಳಜಿ ಇರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ನಗರಕ್ಕೆ ಭೇಟಿ ನೀಡುತ್ತಾರೆ ಎಂದು ಒಂದೇ ದಿನದಲ್ಲಿ ಯಮಗುಂಡಿಗಳಂತಹ ರಸ್ತೆಗಳೆಲ್ಲವನ್ನು ರಿಪೇರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಅವರು ಬರುವ ರಸ್ತೆಗಳೆಲ್ಲಾ ಥಳ ಧಳ ಅಂತಾ ಹೊಳೆಯುತ್ತಿವೆ.
ಪ್ರಧಾನಿ ಮೋದಿ ಹೆಚ್‍ಎಲ್‍ನಿಂದ ಪ್ಯಾಲೇಸ್ ಗ್ರೌಂಡ್‍ಗೆ ಬರಲಿದ್ದಾರೆ. ಹೀಗಾಗಿ ಎಂಜಿ ರೋಡ್, ಒಲ್ಡ್ ಟ್ರಿನಿಟಿ ರೋಡ್, ಡಿಕೆನ್ಸನ್ ರೋಡ್, ರಾಜಭವನ ರಸ್ತೆ, ಸ್ಯಾಂಕಿ ರೋಡ್‍ನಲ್ಲಿ ಇದ್ದಂತಹ ಯಮಗುಂಡಿಗಳು ಒಂದೇ ದಿನದಲ್ಲಿ ಮಾಯವಾಗಿವೆ.
ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಆಗಮಿಸುತ್ತಿದ್ದು, ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಮಧ್ಯಾಹ್ನ ಸುಮಾರು 3.30 ಕ್ಕೆ ಬೆಂಗಳೂರಿಗೆ ಬಜ್ಪೆಯಿಂದ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಬಂದು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಲಹರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಂಜೆ ಸುಮಾರು 4.45 ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಧಾನಿ ಮೋದಿ ಅವರು ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಂಜೆ 5.10 ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.