ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದ ಬಳಿಕ ಫೆಬ್ರವರಿ 19ರಂದು ಪ್ರಧಾನಿ ಮೋದಿ ಮೈಸೂರು ನಗರಕ್ಕೆ ಆಗಮಿಸಲಿದ್ದಾರೆ. ಸಮಾರೋಪದ ಕಾರ್ಯಕ್ರಮದಲ್ಲಿ ಮೋದಿ ಭಾಷಣ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು ಮತ್ತು ಕಾಂಗ್ರೆಸ್ ನಾಯಕರು ಈ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ಬಾರಿಯೂ ಮೋದಿ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ತವರು ಕ್ಷೇತ್ರೆಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಮೋದಿ ಭಾಷಣದಲ್ಲಿ ಏನಿರುತ್ತೆ?: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಅಪ್ಪ-ಮಗನ ಕ್ಷೇತ್ರ ಅಂತಿದ್ರು. ಆದ್ರೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಕುಟುಂಬ ರಾಜಕಾರಣಕ್ಕೆ ಏನಂತೀರಾ? ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ತಂದಿದ್ದೀರಾ? ಮತ್ತು ಎಷ್ಟು ಕಾರ್ಯಗತವಾಗಿದೆ? ಎಷ್ಟು ನಿಂತು ಹೋಗಿದೆ? ಎಂದು ಪ್ರಶ್ನೆ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ 25 ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆ, ಕೇಂದ್ರ ಸರ್ಕಾರದ್ದಲ್ಲ. ಈ ಹಿಂದೆ 10 ಪರ್ಸೆಂಟ್ ಸರ್ಕಾರ ಅಂತಾ ಹೇಳಿದ್ದೆ. ಆದ್ರೆ ಈಗ ಭ್ರಷ್ಟಾಚಾರದಲ್ಲಿ ನಂಬರ್ 1 ಸರ್ಕಾರ ಅಂತ ಹೇಳ್ತೀನಿ ಎಂಬ ಅಂಶಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸಲಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮೋದಿ ಅವರನ್ನು ಬಹಿರಂಗ ಚರ್ಚೆಗೆ ಬನ್ನಿ ಅಂತಾ ಟ್ವಿಟರ್‍ನಲ್ಲಿ ಸವಾಲು ಹಾಕಿದ್ದಕ್ಕೆ, ದಾಖಲೆಗಳ ಸಮೇತ ನಮ್ಮ ರಾಜ್ಯ ನಾಯಕರ ಜೊತೆ ಚರ್ಚೆಗೆ ಬನ್ನಿ ಅಂತಾ ಉತ್ತರ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.