ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಸಾಮಾನ್ಯವಾಗಿ ಪುರಾಣ ಕಥೆಗಳು ಯಕ್ಷರಂಗದ ಮೇಲೆ ಪ್ರದರ್ಶನಗೊಳ್ಳುತ್ತವೆ. ಆದ್ರೆ ಇದೀಗ ಪ್ರಧಾನಿ ನರೇಂದ್ರ ಮೋದಿಯ ಜೀವನದ ಕಥೆಯೂ ಯಕ್ಷಗಾನ ಪ್ರಸಂಗವಾಗಿ ಮೂಡಿ ಬಂದಿದೆ. ಮೋದಿ ಅಭಿಮಾನಿಗಳು ಸೇರಿ “ನರೇಂದ್ರ ವಿಜಯ” ಎನ್ನುವ ಪ್ರಸಂಗ ಪ್ರದರ್ಶಿಸಿ, ಯಕ್ಷಗಾನಕ್ಕೂ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಲೇಪ ಕಟ್ಟಿಕೊಟ್ಟಿದ್ದಾರೆ.
Advertisement
ಮೋದಿ ಲೈಫ್ ಸ್ಟೋರಿ ಸಿನಿಮಾ ಆಗಿ ಸದ್ದು ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಕರಾವಳಿಯ ಯಕ್ಷಗಾನದಲ್ಲೂ ಮೋದಿ ಜೀವನಗಾಥೆ ಮೂಡಿಬಂದಿದೆ. ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿಎಂಬವರು ಬರೆದ ‘ನರೇಂದ್ರ ವಿಜಯ’ ಎಂಬ ಕಾಲ್ಪನಿಕ ಕೃತಿಗೆ ಪ್ರಸಂಗಕರ್ತ ಎಂ.ಕೆ.ರಮೇಶ್ ಆಚಾರ್ಯ ಯಕ್ಷಗಾನ ಶೈಲಿಯ ಪದ್ಯಗಳನ್ನು ಬರೆದು, ಪ್ರಸಂಗವಾಗಿ ಪರಿವರ್ತಿಸಿದ್ದಾರೆ. ನರೇಂದ್ರ ವಿಜಯ ಯಕ್ಷಗಾನ ಪ್ರಸಂಗದ ಮೊದಲ ಪ್ರದರ್ಶನ ಮಂಗಳೂರಿನ ಕೊಡಿಯಾಲ್ ಬೈಲಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಪ್ರದರ್ಶನಗೊಂಡಿದ್ದು, ಮೋದಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎರಡೂವರೆ ಗಂಟೆ ಕಾಲ ಪ್ರದರ್ಶನಗೊಂಡ ಈ ಕಾಲ್ಪನಿಕ ಕಥೆಯ ಯಕ್ಷಗಾನ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಮೋದಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿತ್ತು.
Advertisement
Advertisement
ನರೇಂದ್ರ ವಿಜಯ ಯಕ್ಷಗಾನದಲ್ಲಿ ಏನಿತ್ತು?
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿವರೆಗಿನ ಪ್ರಮುಖ ಘಟನೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲಾಗಿದೆ. ಅಮಿತ್ ಶಾ ‘ವಿಜಯ’ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಕಡಿವಾಣ ನೆಪದಲ್ಲಿ ಕೈಗೊಂಡ ನೋಟ್ ಬ್ಯಾನ್, ಮುಸ್ಲಿಂ ಮಹಿಳೆಯರ ರಕ್ಷಣೆಗೆ ಜಾರಿ ಮಾಡಿದ ತ್ರಿವಳಿ ತಲಾಖ್ ಮಸೂದೆ, ಕೇದಾರನಾಥಕ್ಕೆ ಮೋದಿ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಶಿವ ಪ್ರತ್ಯಕ್ಷನಾಗುವ ಸನ್ನಿವೇಶ ಕೂಡ ಇದೆ. ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ್ದು, ಇದರಿಂದ ಉಂಟಾದ ಪರಿಣಾಮಗಳು, ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಹೀಗೆ ಅನೇಕ ವಿಷಯಗಳನ್ನು ಪ್ರಸಂಗದಲ್ಲಿ ಚಿತ್ರಿಸಲಾಗಿದೆ. ಮೋದಿಯವರ ತಾಯಿ ಹೀರಾಬೆನ್ ಹಿರಿಯಮ್ಮನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಐತಿಹಾಸಿಕ ಘಟನೆಗಳು, ವ್ಯಕ್ತಿಗಳನ್ನಾಧರಿಸಿದ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದ ನಿದರ್ಶನ ಕರಾವಳಿಯಲ್ಲಿದೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯ ಜೀವನದ ಕಥೆಯನ್ನೂ ಸೇರಿಸಲಾಗಿದ್ದು ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು. ಮೋದಿ ಅಭಿಮಾನಿಗಳು ಮಾತ್ರ ನೋಡಿದ್ದಲ್ಲದೆ, ಯಕ್ಷಗಾನಕ್ಕೂ ರಾಜಕೀಯದ ಲೇಪ ಕಟ್ಟಿಕೊಟ್ಟಿದ್ದಾರೆಂಬ ಟೀಕೆಯೂ ಕೇಳಿ ಬಂದಿದೆ.