ನವದೆಹಲಿ: ರೈತರ (Farmers) ಕಾವಲಿಗೆ ನಾನು ಗೋಡೆಯಂತೆ ನಿಂತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಈ ಮೂಲಕ ಅಮೆರಿಕ ಹಾಗೂ ಭಾರತದ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ದಲ್ಲಿ ಕೃಷಿ ಮತ್ತು ಡೈರಿ ವಲಯಕ್ಕೆ ರಿಯಾಯಿತಿ ಬಯಸುತ್ತಿರುವ ಟ್ರಂಪ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಅವರು ನಾತನಾಡಿದರು. ಈ ವೇಳೆ, ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗೆ ತೊಂದರೆಯಾಗುವ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ರೈತರ ರಕ್ಷಿಸಲು ತಾನು ಗೋಡೆಯಂತೆ ನಿಂತಿದ್ದೇನೆ ಎಂದು ಹೇಳಿದ್ದಾರೆ.
ಪ್ರಸ್ತಾವಿತ ಒಪ್ಪಂದದ ಮೂಲಕ ಜೋಳ, ಸೋಯಾಬೀನ್, ಸೇಬು, ಬಾದಾಮಿ ಮತ್ತು ಎಥೆನಾಲ್‌ನಂತಹ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಮತ್ತು ಅಲ್ಲಿನ ಡೈರಿ ಉತ್ಪನ್ನಗಳಿಗೆ ಪ್ರವೇಶ ಪಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಅಮೆರಿಕದ ಈ ಬೇಡಿಕೆಗೆ ಭಾರತದ ವಿರೋಧವಿದೆ. ಏಕೆಂದರೆ ಈ ನೀತಿಯಿಂದ ಭಾರತದ ರೈತರಿಗೆ ನಷ್ಟವಾಗಲಿದೆ.
ಅಮೆರಿಕದೊಂದಿಗೆ ಇನ್ನು ಕೆಲವೇ ದಿನಗಳಲ್ಲಿ ಭಾರತವು ಟ್ರೇಡ್ ಡೀಲ್ ಅಂತಿಮಗೊಳಿಸದಿದ್ದರೆ ಟ್ಯಾರಿಫ್ ಕಂಟಕ ಎದುರಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು 50% ಹೆಚ್ಚಿಸಿದ್ದರು. ಇದು ಆ.27 ರಿಂದ ಜಾರಿಗೆ ಬರಲಿದೆ. ಪ್ರಸ್ತುತ, ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ 25% ಸುಂಕವಿದೆ.