ನವದೆಹಲಿ: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪನವರು (SL Bhyrappa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕಿ ಬಾತ್ (Man Ki Baat) ಕಾರ್ಯಕ್ರಮದಲ್ಲಿ ಸ್ಮರಿಸಿದ್ದಾರೆ. ತಮ್ಮ 126ನೇ ಮನದ ಮಾತು ಕಾರ್ಯಕ್ರಮದಲ್ಲಿ ನೆನೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ನಾನು ಮತ್ತು ನನ್ನ ದೇಶ ಮಹಾನ್ ವಿಚಾರವಾದಿ, ಮಹಾನ್ ಚಿಂತಕರೊಬ್ಬರನ್ನ ಕಳೆದುಕೊಂಡಿದೆ. ನಾನು ಅವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರಗಳ ಮಂಥನ ನಡೆಸಿದ್ದೇವೆ. ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ್ಮ ಮೂಲ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು, ಗೌರವ ತೋರಿಸಬೇಕು ಎಂಬುದನ್ನ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದು ಭಾವುಕರಾದರು.
ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕ, ಅವರ ಪುಸ್ತಕಗಳು ಯುವಕರಿಗೆ ಪ್ರೇರಣೆ, ಅವ್ರ ಕೃತಿಗಳನ್ನ ಯುವಕರು ಹೆಚ್ಚು ಹೆಚ್ಚು ಓದಬೇಕು ಎಂದು ಕರೆ ನೀಡಿದರು.
ʻಪರ್ವʼತ ಅಸ್ತಂಗತ
ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದೆ. ತಮ್ಮ ಕಾದಂಬರಿಗಳಿಂದಲೇ ಮನೆಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಚೈತನ್ಯದ ಚಿಲುಮೆ ಡಾ.ಎಸ್.ಎಲ್ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ನಿನ್ನೆ ವಿಧಿವಶರಾಗಿದ್ದಾರೆ. 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.


