LatestLeading NewsMain PostNational

ಅಬೆಯೊಂದಿಗಿನ ಹಳೆ ಕ್ಷಣ ನೆನೆದ ಮೋದಿ – ಜುಲೈ 9ರಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ

Advertisements

ನವದೆಹಲಿ: ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ(62) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಮ್ಮ ಆತ್ಮೀಯನ ಅಗಲಿಕೆಯಿಂದ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆಳವಾದ ಗೌರವದ ಸಂಕೇತವಾಗಿ ಜುಲೈ 9ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ನಡೆಸಲು ಸೂಚಿಸಿದ್ದಾರೆ.

ನರೇಂದ್ರ ಮೋದಿ ತಮ್ಮ ಗೆಳೆಯ ಶಿಂಜೋ ಅಬೆಯವರ ಒಡನಾಟದ ನೆನಪನ್ನು ಭಾವುಕರಾಗಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮೋದಿ, ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೋ ಅಬೆ ಅವರ ದುರಂತ ನಿಧನದಿಂದ ನಾನು ಪದಗಳಲ್ಲಿ ಹೇಳಲಾಗದಷ್ಟು ಆಘಾತ ಮತ್ತು ದುಃಖಿತನಾಗಿದ್ದೇನೆ. ಅವರು ಅತ್ಯುನ್ನತ ಜಾಗತಿಕ ರಾಜಕಾರಣಿ, ಅತ್ಯುತ್ತಮ ನಾಯಕ ಹಾಗೂ ಗಮನಾರ್ಹ ಆಡಳಿತಗಾರರಾಗಿದ್ದರು. ಜಪಾನ್ ಹಾಗೂ ಜಗತ್ತನ್ನು ಉತ್ತಮವಾಗಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು – ಆಸ್ಪತ್ರೆಯಲ್ಲಿ ನಿಧನ

ಅಬೆ ಅವರೊಂದಿಗಿನ ನನ್ನ ಒಡನಾಟ ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಾನು ಪ್ರಧಾನಿಯಾದ ಬಳಿಕವೂ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣವಾದ ಒಳನೋಟ ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿತ್ತು ಎಂದರು.

ನನ್ನ ಇತ್ತೀಚಿನ ಜಪಾನ್ ಪ್ರವಾಸದ ಸಂದರ್ಭದಲ್ಲಿ ಅಬೆ ಅವರನ್ನು ಮತ್ತೊಮ್ಮೆ ಭೇಟಿ ಮಾಡಲು ಹಾಗೂ ಅನೇಕ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಅವರು ಎಂದಿನಂತೆ ಬುದ್ಧಿವಂತ ಮತ್ತು ಒಳನೋಟವುಳ್ಳವರಾಗಿದ್ದರು. ಆದರೆ ಅದು ನಮ್ಮ ಕೊನೆಯ ಸಭೆ ಎಂದು ನನಗೆ ತಿಳಿದಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು

ಅಬೆ ಅವರು ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಅಪಾರ ಕೊಡುಗೆ ನೀಡಿದ್ದಾರೆ. ಇಂದು, ಇಡೀ ಭಾರತ ಜಪಾನ್‌ನೊಂದಿಗೆ ದುಃಖಿಸುತ್ತಿದೆ. ಈ ಕಷ್ಟದ ಕ್ಷಣದಲ್ಲಿ ನಾವು ಜಪಾನಿನ ಸಹೋದರ-ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಬೆ ಶಿಂಜೋ ಅವರಿಗೆ ನಮ್ಮ ಆಳವಾದ ಗೌರವದ ಸಂಕೇತವಾಗಿ, ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button