ದೇಶದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಯುದ್ಧದಲ್ಲಿ ಸೈನಿಕ: ಮೋದಿ

Public TV
3 Min Read
modi 9

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು 64ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ ಪ್ರತಿಯೋರ್ವ ನಾಗರಿಕನೂ ಕೊರೊನಾ ವೈರಸ್ ತೊಲಗಿಸಲು ದೇಶ ಸಾರಿರುವ ಯುದ್ಧದಲ್ಲಿ ಸೈನಿಕ ಎಂದು ಹೇಳಿದ್ದಾರೆ.

ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾ ವೈರಸ್ ವಿರುದ್ಧ ದೇಶದ ಜನರು ಹೋರಾಡುತ್ತಿರುವುದಕ್ಕೆ ಮೋದಿ ಶ್ಲಾಘಿಸಿದರು. ಸರ್ಕಾರದ ಜೊತೆ ಕೈಜೋಡಿಸಿ ದೇಶದ ಜನತೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರೂ ಈ ಹೋರಾಟ, ಯುದ್ಧದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಕೊರೊನಾ ವಿರುದ್ಧ ದೇಶ ಸಾರಿರುವ ಯುದ್ಧದಲ್ಲಿ ಹೋರಾಡುತ್ತಿರುವ ಪ್ರತಿಯೋರ್ವ ನಾಗರಿಕನೂ ಸೈನಿಕನೇ ಎಂದು ಪ್ರಧಾನಿ ಹಾಡಿ ಹೊಗಳಿದ್ದಾರೆ.

ನಾನು ದೇಶದ 130 ಕೋಟಿ ನಾಗರಿಕರಿಗೂ ಆಭಾರಿಯಾಗಿದ್ದೇನೆ. ಪ್ರತಿಯೊಬ್ಬರೂ ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ಸಾಥ್ ನೀಡುತ್ತಿದ್ದಾರೆ. ರೈಲ್ವೆ, ವಿಮಾನ ಸಂಸ್ಥೆಗಳು ಔಷಧಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡುತ್ತಿವೆ. ಮಾಸ್ಕ್ ಧರಿಸಿದ್ದಾರೆ ಎಂದರೆ ಅವರು ಅಸ್ವಸ್ಥರು ಅಂತ ಅರ್ಥವಲ್ಲ. ಸೋಂಕಿನಿಂದ ದೂರ ಉಳಿಯಲು ಮುನ್ನೆಚ್ಚಾರಿಕಾ ಕ್ರಮವಾಗಿ, ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಉತ್ತಮ ಎಂದು ಹೇಳಿದರು. ಹಾಗೆಯೇ ಎಲ್ಲೆಂದರಲ್ಲಿ ಉಗುಳಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪು ಎಂದು ಗೊತ್ತಿದ್ದರು ಕೆಲವರು ಅದೇ ತಪ್ಪನ್ನು ಮುಂದುವರಿಸುತ್ತಾರೆ. ದಯವಿಟ್ಟು ಎಲ್ಲೆಂದರಲ್ಲಿ ಉಗುಳಬೇಡಿ, ಸ್ವಚ್ಛತೆ ಕಾಪಾಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟೋಣ ಎಂದು ಮನವಿ ಮಾಡಿದರು.

ನಮ್ಮ ಸಮಾಜ ಬದಲಾಗಿದೆ. ಕೊರೊನಾ ವಾರಿರ್ಯಸ್ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ಬಗ್ಗೆ ನಮಗೆ ಇದ್ದ ಅಭಿಪ್ರಾಯ ಕೂಡ ಬದಲಾಗಿದೆ. ಈ ಬದಲಾವಣೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ. ಅಲ್ಲದೇ ದೇಶದ ಹಲವೆಡೆ ಪೌರ ಕಾರ್ಮಿಕರ ಮೇಲೆ ಹೂವಿನ ಮಳೆಗೈದು ಜನರು ಧನ್ಯವಾದ ಹೇಳುತ್ತಿದ್ದಾರೆ. ಈ ಹಿಂದೆ ಅವರ ಶ್ರಮವನ್ನು ಗಮನಿಸಿದ ಜನರು ಈಗ ಅವರ ಶ್ರಮ ಹಾಗೂ ಕೆಲಸವನ್ನು ಮೆಚ್ಚಿ, ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಹೇಳಿದರು.

ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ದೇಶ ಸಂಕಷ್ಟದಲ್ಲಿರುವಾಗ ನರ್ಸ್‍ಗಳು, ವೈದ್ಯರು, ಇತರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಜನರಿಗಾಗಿ ಸೇವೆಸಲ್ಲಿಸುತ್ತಿದ್ದಾರೆ. ಅವರನ್ನು ನಾವು ಗೌರವಿಸಬೇಕು ಎಂದು ಹೇಳಿದರು. ಹಾಗೆಯೇ ನಮ್ಮ ರೈತರು ಯಾವತ್ತೂ ದೇಶದ ಜನರು ಉಪವಾಸ ಇರಲು ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಬಹಳಷ್ಟು ಮಂದಿ ಹಿರಿಯರು ತಮ್ಮ ಸಂಪೂರ್ಣ ಪಿಂಚಣಿ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿ ಕೊರೊನಾ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಬಹಳಷ್ಟು ಮಂದಿ ರೈತರು ಬಡವರಿಗೆ ಹಂಚಲು ಸರ್ಕಾರಕ್ಕೆ ಉಚಿತ ತರಕಾರಿಗಳನ್ನು ನೀಡುತ್ತಿದ್ದಾರೆ. ಹಲವರು ಉಚಿತ ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಎಲ್ಲರೂ ಕೊರೊನಾ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಹೋರಾಡುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೇ ದೇಶಗಳಿಗೆ ಅಗತ್ಯವಿದ್ದ ಔಷಧಗಳನ್ನು ಭಾರತ ಪೂರೈಕೆ ಮಾಡಿತ್ತು ಎಂಬ ವಿಚಾರವನ್ನು ಮೋದಿ ಮನ್ ಕಿ ಬಾತ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ಬೇರೆ ಬೇರೆ ದೇಶಗಳಿಗೆ ಸಹಾಯ ಮಾಡಲು ಭಾರತ ಅನೇಕ ಕ್ರಮಗಳನ್ನು ಕೈಗೊಂಡಿದೆ. ನಮ್ಮ ಸಹಾಯಕ್ಕೆ ಸಾಕಷ್ಟು ರಾಷ್ಟ್ರಗಳು ಧನ್ಯವಾದ ಅರ್ಪಿಸಿವೆ. ಬೇರೆ ರಾಷ್ಟ್ರಗಳು ಭಾರತಕ್ಕೆ, ಭಾರತೀಯರಿಗೆ ಧನ್ಯವಾದ ಹೇಳಿದಾಗ ನನಗೆ ಹೆಮ್ಮೆ ಆಗುತ್ತದೆ. ಭಾರತ ತನ್ನ ಜನತೆಗೆ ಹಿತಕ್ಕಾಗಿ ಭೂಮಿಯನ್ನು ಆರೋಗ್ಯಕರವಾಗಿಸಲು ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ರನ್ನು coronawarriors.gov.in ಪೋರ್ಟಲ್ ಮೂಲಕ ಸಂಪರ್ಕಿಸುವಂತೆ ಕರೆ ನೀಡಿದರು. ಇತ್ತೀಚೆಗೆ ಆರಂಭಗೊಂಡ ಈ ಪೋರ್ಟಲ್ ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ. ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದು ಮೋದಿ ಹೇಳಿದರು.

ಇಂದು ಅಕ್ಷಯ ತೃತೀಯ ಈ ವರ್ಷ ಇದನ್ನು ಆಚರಿಸಲು ಸಾಧ್ಯವಾಗದಿದ್ದರೂ ನಮಗೆ ವಿಶೇಷ ಮಹತ್ವವನ್ನು ಹೊಂದಿದೆ. ಕೊರೊನಾ ಸೋಂಕಿನ ವರ್ಷ ಎಂದು ಈ ವರ್ಷವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಈ ವರ್ಷ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ ಸಮಯದಲ್ಲಿ ಇಷ್ಟೊಂದು ಕಷ್ಟಗಳು ಬರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಈದ್ ಆಚರಣೆ ವೇಳೆಗೆ ನಾವು ಕೊರೊನಾ ಮುಕ್ತರಾಗೋಣ ಎಂದು ಪ್ರಾರ್ಥಿಸಿಕೊಳ್ಳೋಣ ಎಂದರು.

Share This Article
Leave a Comment

Leave a Reply

Your email address will not be published. Required fields are marked *