ಲೋಕಸಭಾ ಚುನಾವಣೆಯ ದಿನಾಂಕ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆ ಆಗಲಿದೆ. ಈ ನಡುವೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಪಕ್ಷದ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದರೆ, ಇನ್ನೊಂದೆಡೆ ಸೋಲು-ಗೆಲುವಿನ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿದೆ. ಮತ್ತೊಂದೆಡೆ ರಾಜಕೀಯ ನಾಯಕರು ಈಗಾಗಲೇ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ರಾಜಕೀಯ ನಾಯಕರ ಹೇಳಿಕೆಗಳು ಇನ್ನೊಂದು ಪಕ್ಷಕ್ಕೆ ವರವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ನೀಡಿರುವ ಹೇಳಿಕೆ ಇದೀಗ ಬಿಜೆಪಿಗೆ ಮತ್ತೆ ವರವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಈ ಹಿಂದೆ ವಿರೋಧ ಪಕ್ಷಗಳ ಹೇಳಿಕೆಗಳು ಬಿಜೆಪಿಗೆ ಪ್ಲಸ್ ಆಗಿದೆ. ಈ ಹಿಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿರುವ ಹೇಳಿಕೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ. ಅಂತೆಯೇ ಈ ಬಾರಿಯು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ನೀಡಿರುವ ಹೇಳಿಕೆಯಿಂದ ಬಿಜೆಪಿ ಜಯಗಳಿಸಲು ಸಹಾಯವಾಗುತ್ತಾ ಎನ್ನುವುದೇ ಸದ್ಯದ ಕುತೂಹಲ.
Advertisement
ಲಾಲೂ ಪ್ರಸಾದ್ ಹೇಳಿದ್ದೇನು?: ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಹಾಮೈತ್ರಿಕೂಟದ ಎಲ್ಲಾ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಈ ವೇಳೆ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಕುಟುಂಬದ ಬಗ್ಗೆ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ನಮ್ಮದು ಕುಟುಂಬ ರಾಜಕಾರಣ ಅಂತ ಮೋದಿ (Narendra Modi) ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ ಎಂದು ಹೇಳಿದ್ದರು.
Advertisement
Advertisement
ಲಾಲೂ ಪ್ರಸಾದ್ ಹೇಳಿಕೆಗೆ ದೇಶಾದ್ಯಂತ ಬಿಜೆಪಿ ಬೆಂಬಲಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರೆ, ಪ್ರಧಾನಿ ಬೆಂಬಲಿಗರು ಮತ್ತು ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್‍ಗಳಲ್ಲಿ ‘ನಾನು ಮೋದಿ ಕುಟುಂಬ’ ಎಂದು ಬರೆಯಲು ಪ್ರಾರಂಭಿಸಿದರು. ಕ್ರಮೇಣ ‘ಮೈ ಹೂನ್ ಮೋದಿ ಕಾ ಪರಿವಾರ್’ ಸಾಮಾಜಿಕ ಮಾಧ್ಯಮದ ಟ್ರೆಂಡಿಂಗ್ ಪಟ್ಟಿಗೆ ಸೇರಿಕೊಂಡಿತು. ಬಳಿಕದಿಂದ #ModiKaParivar ಟ್ರೆಂಡಿಂಗ್ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ಸಂಸದರು, ಶಾಸಕರು ಮತ್ತು ದೇಶದಾದ್ಯಂತ ಪ್ರಧಾನಿ ಮೋದಿಯನ್ನು ಇಷ್ಟಪಡುವ ಜನರು ಎಕ್ಸ್ ಖಾತೆಯಲ್ಲಿ ತನ್ನ ಹೆಸರಿನ ಮುಂದೆ ಮೋದಿ ಕಾ ಪರಿವಾರ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್ ಜೆಡಿ ಮುಖ್ಯಸ್ಥನಿಗೆ ತಿರುಗೇಟು ನೀಡಿದ್ದಾರೆ.
Advertisement
ಮೋದಿ ಹೇಳಿದ್ದೇನು..?: ಆರ್‍ಜೆಡಿ ಮುಖ್ಯಸ್ಥನ ಹೇಳಿಕೆಗೆ ಪ್ರಧಾನಿ ನರೆಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ತೆಲಂಗಾಣದ ಅದಿಲಾಬಾದ್‍ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ವಿರುದ್ಧದ ಹೋರಾಟದ ಕುರಿತು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ದೇಶದ 140 ಕೋಟಿ ಜನರೇ ನನ್ನ ಕುಟುಂಬ ಎಂದು ಹೇಳುವ ಮೂಲಕ ಮೋದಿ ತಿರುಗೇಟು ಕೊಟ್ಟರು. ದೇಶದ ಕೋಟ್ಯಂತರ ಹೆಣ್ಣುಮಕ್ಕಳು, ತಾಯಂದಿರು, ಸಹೋದರಿಯರು ಮೋದಿಯವರ ಕುಟುಂಬ ಎಂದು ಹೇಳಿದರು. ದೇಶದ ಪ್ರತಿಯೊಬ್ಬ ಬಡವನೂ ನನ್ನ ಕುಟುಂಬ ಎಂದು ಹೇಳಿದ್ದರು. ಪ್ರಧಾನಿಯವರು ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ‘ಮೋದಿ ಕಾ ಪರಿವಾರ್’ ಎಂಬ ಅಭಿಯಾನ ಶುರು ಮಾಡಿದ್ದಾರೆ.
ಮೋದಿಗೆ ಬೈದ್ರೆ ಬಿಜೆಪಿಗೆ ಪ್ಲಸ್: ಮೋದಿ ಮೇಲೆ ವಿಪಕ್ಷಗಳು ವೈಯಕ್ತಿಕವಾಗಿ ವಾಗ್ದಾಳಿ ನಡೆಸುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ಮಾತಿನ ಮೂಲಕ ಇಂತಹ ಅನೇಕ ಪರ್ಸನಲ್ ಅಟ್ಯಾಕ್ ಗಳು ನಡೆದಿವೆ. ಪ್ರತಿ ಚುನಾವಣೆ ವೇಳೆಯೂ ಮೋದಿ ಮೇಲೆ ವಿಪಕ್ಷಗಳು ಈ ರೀತಿ ಬಹಳಷ್ಟು ಸಲ ಅಟ್ಯಾಕ್ ಮಾಡಿವೆ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗಾಂಧಿ (Rahul Gandhi) ರಾಜಸ್ಥಾನದಲ್ಲಿ ಸಾರ್ವಜನಿಕ ಭಾಷಣದ ವೇಳೆ ಮೋದಿಯನ್ನು ‘ಪನೌತಿ’ (ಅಪಶಕುನ) ಎಂದಿದ್ರು. ಹೀಗೆ ಮೋದಿಯನ್ನ ವ್ಯಯಕ್ತಿಕವಾಗಿ ನಿಂದಿಸಿದ, ಮೋದಿ ಮೇಲೆ ಪರ್ಸನಲ್ ಅಟ್ಯಾಕ್ ಮಾಡಿದ ಪಂಚರಾಜ್ಯ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಈ 3 ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿತು.
ಚಾಯ್‍ವಾಲ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನಾಯಕ ಮಣಿಶಂಕರ್ ಅಯ್ಯರ್, ಮೋದಿ ಎಂದಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಬೇಕಿದ್ರೆ ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಟೀ ಮಾರಿಕೊಂಡು ಇರಬಹುದು ಎಂದು ಟೀಕಿಸಿದ್ರು. ಕಾಂಗ್ರೆಸ್ ಬಿಟ್ಟ ಚಾಯ್‍ವಾಲ ಅಸ್ತ್ರವನ್ನು ಚುನಾವಣಾ ಪ್ರಚಾರಗಳಲ್ಲಿ ಪ್ರಯೋಗಿಸ್ತಾ ಬಂತು. ಚಹಾ ಮಾರುವವನು ಯಾಕೆ ಯಾವ ದೊಡ್ಡ ಹುದ್ದೆಯನ್ನ ಅಲಂಕರಿಸಬಾರದೇ ಎಂದು ಕ್ಯಾಂಪೇನ್ ಶುರು ಮಾಡಿತು. ಮೋದಿ 2014ರಲ್ಲಿ ಇದೇ ಚಾಯ್‍ವಾಲ ಅಸ್ತ್ರವನ್ನಿಟ್ಟುಕೊಂಡು ʼಚಾಯ್ ಪೇ ಚರ್ಚೆʼ ಅಭಿಯಾನ ಶುರು ಮಾಡಿದ್ರು. ಪರಿಣಾಮ ಬಿಜೆಪಿ 272 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ಮೋದಿ ಪ್ರಧಾನಿಯಾದರು.
`ಚೌಕಿದಾರ್ ಚೋರ್ ಹೇ’: 2019ರಲ್ಲೂ ಮತ್ತೆ ಮೋದಿ ಮೇಲೆ ಮಾತಿನ ದಾಳಿ ನಡೆಸಿಯೇ ಸೋತವು. 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಡೆಸಿದ ಏರ್ ಸ್ಟ್ರೈಕ್ ದಾಳಿ ಬಗ್ಗೆ ಮೋದಿ ವೇದಿಕೆಯಲ್ಲಿ ಮಾತನಾಡುತ್ತಾ ದೇಶ ಕಾಯಲು ಚೌಕಿದಾರನಿದ್ದಾನೆ ಎಂದು ತಮ್ಮನ್ನ ತಾವು ತೋರಿಸಿ ಹೇಳಿದ್ರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕ ವೇದಿಕೆಯಲ್ಲಿ ಮೋದಿಯ ವಿರುದ್ಧ ʼಚೌಕಿದಾರ್ ಚೋರ್ ಹೇʼ ಅಂತ ಟೀಕಿಸಿದ್ರು. ಇದನ್ನ ಗಮನಿಸಿ ಬಿಜೆಪಿ ನಾಯಕರು ʼಮೇ ಬಿ ಚೌಕಿದಾರ್ʼ ಅಭಿಯಾನ ಆರಂಭಿಸಿದ್ರು. ಅಂದು ಕೂಡ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ʼಮೇ ಬೀ ಚೌಕಿದಾರ್ʼ ಅಂತ ಸೇರಿಸಿಕೊಂಡು ಅಭಿಯಾನ ಮಾಡಿದ್ರು. ಪರಿಣಾಮ 2019ರಲ್ಲಿ ಕಾಂಗ್ರೆಸ್ (Congress) ಸೋತಿತು. ಇದೀಗ ಮತ್ತೆ 2024ರ ಲೋಕಸಭಾ ಚುನಾವಣೆ ಹತ್ತಿರ ಇದೆ. ಈಗ ಮೋದಿಗೆ ಕುಟುಂಬವಿಲ್ಲ ಅಂತಾ ಮತ್ತೆ ವಿಪಕ್ಷಗಳ ಒಕ್ಕೂಟ ಮತ್ತೆ ಮೋದಿ ವಿರುದ್ಧ ಟೀಕೆಗಿಳಿದಿದೆ. ಇದನ್ನ ಈಗ ಮತ್ತೆ ಬಿಜೆಪಿ ‘ನಾನೂ ಮೋದಿ ಕಿ ಪರಿವಾರ್’ ಆಂದೋಲನ ಶುರು ಮಾಡಿದೆ.
ಒಟ್ಟಾರೆ ಈ ಹಿಂದೆ ಪ್ರತಿ ವೈಯಕ್ತಿಕ ದಾಳಿಗಳು ಮೋದಿಗೆ ಲಾಭವನ್ನೇ ತಂದುಕೊಟ್ಟಿದೆ. ಈ ವಿಚಾರ ಗೊತ್ತಿದ್ದರೂ ವಿಪಕ್ಷ ನಾಯಕರು ಮತ್ತೆ ಮೋದಿ ವಿರುದ್ಧವಾಗಿಯೇ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಇದೀಗ ಮೋದಿ ಕುಟುಂಬದ ವಿಚಾರವಾಗಿ ಅಟ್ಯಾಕ್ ಮಾಡಿದ್ದಾರೆ. ಇದನ್ನು ಬಿಜೆಪಿಯವರು ಅಭಿಯಾನವನ್ನಾಗಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಕಿ ಪರಿವಾರ್ ಕ್ಯಾಂಪೇನ್‍ನ ಹವಾ ಎದ್ದಿದೆ. ಹಾಗಾಗಿ ಇದು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಎಫೆಕ್ಟ್ ಬೀರುತ್ತೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತೆ.