Saturday, 21st July 2018

Recent News

ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸುಳ್ಳು ಹೇಳ್ತಾರೆ: ರಾಹುಲ್ ಗಾಂಧಿ

ರಾಯಚೂರು: ಪ್ರಧಾನಿ ಮೋದಿ ಹೋದಲೆಲ್ಲಾ ಸುಳ್ಳು ಹೇಳ್ತಾರೆ. ಇದುವರೆಗೆ ರೈತರಿಗಾಗಲಿ, ದೇಶದ ಜನರಿಗಾಗಿ ಏನನ್ನೂ ಮಾಡಿಲ್ಲ ಅಂತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ರೈತಪರವಾಗಿಲ್ಲ. ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದ್ರೆ ಯಾರಿಗೂ ಉದ್ಯೋಗ ಸಿಕ್ಕಿಲ್ಲ. ತಮಾಷೆ ರೀತಿಯಲ್ಲಿ ನೋಟ್ ಬ್ಯಾನ್ ಮಾಡಿದರು. ದೇಶದ ಪರಸ್ಥಿತಿ ಏನಾಗುತ್ತದೆ ಅಂತ ಯೋಚನೆಯನ್ನೇ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹೈದ್ರಾಬಾದ್ ಕರ್ನಾಟಕ ಜನರ ಬಹುದಿನದ ಹೋರಾಟವಾಗಿದ್ದ ಕಲಂ 371(ಜೆ) ತಿದ್ದುಪಡಿ ಅಂಗೀಕಾರವನ್ನ ಅಂದಿನ ಕೇಂದ್ರ ಗೃಹಸಚಿವ ಲಾಲ್‍ಕೃಷ್ಣ ಅಡ್ವಾಣಿ ನಿರಾಕರಿಸಿದ್ದರು. ಜನರ ಮೇಲಿನ ಕಾಳಜಿಯಿಂದ ನಾವು ಜಾರಿಗೊಳಿಸಿದ್ದೇವೆ ಎಂದರು. ಬಂಡವಾಳ ಶಾಹಿಗಳ ಸಾಲಮನ್ನ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಆದ್ರೆ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಉದ್ಯೋಗಗಳನ್ನ ಸೃಷ್ಠಿಸಿದ್ದಾರೆ ಅಂದ್ರು.

ರಾಹುಲ್ ಗಾಂಧಿ ಮುಂದಿನ ಪ್ರಧಾನಿ: ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿದ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್, ಸತ್ಯಕ್ಕೆ ಯಾವಾಗಲೂ ಜಯವಿದೆ. ನುಡಿದಂತೆ ನಾವು ನಡೆದಿದ್ದೇವೆ, ನಮಗೆ ಜಯವಿದೆ. ನಾವು ಮತದಾರರಲ್ಲಿ ಮತ ಕೇಳುವ ಶಕ್ತಿ ಹೊಂದಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಕೂಲಿ ಕೊಡಿ. ಐದು ವರ್ಷ ಬಿಜೆಪಿ ರಾಜ್ಯದಲ್ಲಿ ಏನನ್ನೂ ಮಾಡಲಿಲ್ಲ. ಮೋಡ, ಗ್ರಹಣ, ಕಷ್ಟಗಳು ಬರುತ್ತವೆ ಅದಕ್ಕೆಲ್ಲಾ ಚಿಂತೆ ಮಾಡಬಾರದು. ಕಾಂಗ್ರೆಸ್ ಪಕ್ಷ ರಾಜ್ಯದ ಜನರನ್ನ ಕಾಯುತ್ತದೆ. ರಾಹುಲ್ ಗಾಂಧಿಯನ್ನ ಮುಂದಿನ ಪ್ರಧಾನಿ ಮಾಡಲು ಎಲ್ಲರೂ ಪಣತೊಡಬೇಕಿದೆ ಅಂದ್ರು.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಅಂಬಾನಿ ಅದಾನಿ ಸಾಲಮನ್ನ ಮಾಡುವ ಸರ್ಕಾರಕ್ಕೆ ರೈತರು ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ರೆ ಆರ್ಥಿಕ ವ್ಯವಸ್ಥೆ ಹಾಳಾಗುತ್ತೆ ಅಂತಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಲೂಟಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ರಾಜ್ಯದಲ್ಲಿ ಅಧಿಕಾರ ಪಡೆಯುತ್ತದೆ ಅಂದ್ರು.

ಸಮಾವೇಶದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಯಚೂರಿಗೆ ಬಂದಿಳಿದ ನಂತರ ಸಿಎಂ ಹಾಗೂ ಪರಮೇಶ್ವರ್ ಸೇರಿದಂತೆ ನಾಯಕರು ಸ್ವಾಗತ ಮಾಡಿದ್ರು. ಜಿಂದಾಲ್ ಏರ್‍ಪೋರ್ಟ್‍ನಿಂದ ರಾಹುಲ್ ಗಾಂಧಿ ಜೊತೆ ಉಸ್ತುವಾರಿ ವೇಣುಗೋಪಾಲ್ ಕೂಡಾ ರಾಯಚೂರಿಗೆ ತೆರಳಿದ್ರು. ಈ ನಡುವೆ ಜಿಂದಾಲ್ ಏರ್‍ಪೋರ್ಟ್‍ಗೆ ರಾಹುಲ್ ಗಾಂಧಿ ಬಂದಿಳಿದಾಗ ಸಚಿವ ಸಂತೋಷ್ ಲಾಡ್, ರಾಹುಲ್ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಇದು ಕಾಂಗ್ರೆಸ್‍ನ ಕೆಲ ನಾಯಕರು ಅಚ್ಚರಿ ಪಡುವಂತೆ ಮಾಡಿತು.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಕಲಂ 371 ಜೆ ಜಾರಿ ಹಿನ್ನೆಲೆ ರಾಹುಲ್ ಗಾಂಧಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2 ಲಕ್ಷ ಚದರಡಿ ಜಾಗದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಿ, 70 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. 4000 ಸಾವಿರ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನೇಮಿಸಲಾಗಿತ್ತು.

 

Leave a Reply

Your email address will not be published. Required fields are marked *