– ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಕ್ರೀಡಾಪಟುಗಳಂತೆ ಪ್ರಧಾನಿ ಮೋದಿ ನವ ಪೀಳಿಗೆ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‍ನಲ್ಲಿಯೂ ಪ್ರಧಾನಿ ಸಕ್ರಿಯವಾಗಿದ್ದು ಜನರ ಜೊತೆ ಸಂಪರ್ಕದಲ್ಲಿದ್ದಾರೆ.
ಮೋದಿ ಅವರು 2009ರಲ್ಲಿ ಗುಜರಾತಿನ ಸಿಎಂ ಆಗಿದ್ದಾಗ ಟ್ವಿಟರ್ ಅಕೌಂಟ್ ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಬಳಿಕವಂತೂ ಮೋದಿ ಟ್ವಿಟ್ಟರ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ನಿರಂತರವಾದ ಟ್ವೀಟ್‍ಗಳ ಮೂಲಕ ಸಕ್ರಿಯವಾಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ.
ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಟ್ವಿಟ್ಟರ್‌ನಲ್ಲಿ 10.84 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 6.4 ಕೋಟಿ ಫಾಲೋವರ್ಸ್ ಇದ್ದಾರೆ. ಈ ಎರಡು ನಾಯಕರ ನಂತರ ಮೋದಿ ಅವರು ವಿಶ್ವದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ರಾಜಕಾರಣಿಯಾಗಿದ್ದಾರೆ.
ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ಮೋದಿ ಜನಪ್ರಿಯತೆಗೆ ಕೊರತೆಯಿಲ್ಲ. ಮೋದಿ ಅವರು ಫೇಸ್‍ಬುಕ್‍ನಲ್ಲಿ 44 ದಶಲಕ್ಷ(4.4 ಕೋಟಿ) ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ ಇನ್‍ಸ್ಟಾಗ್ರಾಮ್‍ನಲ್ಲಿ 28 ದಶಲಕ್ಷಕ್ಕೂ(2.8 ಕೋಟಿ) ಅಧಿಕ ಮಂದಿ ಮೋದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಜೊತೆಗೆ ಮೋದಿ ಅವರ ಅಧಿಕೃತ ಯೂಟ್ಯೂಬ್ ಖಾತೆಯನ್ನು 3.4 ದಶಲಕ್ಷ(34 ಲಕ್ಷ) ಮಂದಿ ಸಬ್‍ಸ್ಕ್ರೈಬ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿಪರರ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಕೂಡ ಮೋದಿ ಸಕ್ರಿಯವಾಗಿದ್ದು, ಅದರಲ್ಲಿ 3 ದಶಲಕ್ಷ(30 ಲಕ್ಷ) ಫಾಲೋವರ್ಸ್ ಹೊಂದಿದ್ದಾರೆ.