ಚಂಡೀಗಢ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ, ಕೇಂದ್ರೀಕೃತ ಸಂಪೂರ್ಣ ಸ್ವಯಂಚಾಲಿತ ಪ್ರಯೋಗಾಲಯ ಸೇರಿದಂತೆ 2,600 ಹಾಸಿಗೆಯುಳ್ಳ ನೂತನ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಹರಿಯಾಣದ ಫರಿದಾಬಾದ್‌ನಲ್ಲಿರುವ ಹೊಸ ‘ಅಮೃತ’ ಆಸ್ಪತ್ರೆ ದೇಶದ ಅತಿ ದೊಡ್ಡ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಹಾಗೂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮೋದಿ, ಭಾರತ ಆರೋಗ್ಯ ಹಾಗೂ ಆಧ್ಯಾತ್ಮಿಕತೆಯ ನಿಕಟ ಸಂಬಂಧ ಹೊಂದಿರುವ ದೇಶವಾಗಿದೆ. ಈ ಸಂಬಂಧಕ್ಕೆ ಕೋವಿಡ್-19 ಒಂದು ಅತ್ಯುತ್ತಮ ಉದಾಹರಣೆ. ಇದು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಕಾರ್ಯಗತಗೊಳಿಸಲು ಸಹಾಯ ಮಾಡಿದೆ ಎಂದರು.
ತಂತ್ರಜ್ಞಾನ ಮತ್ತು ಆಧುನೀಕರಣದ ಸಂಯೋಜನೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಗೆ ಕಾರಣವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಜನರನ್ನು ಮುಂದೆ ತರಲು ಭಾರತ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?
ಆಸ್ಪತ್ರೆ ವಿಶೇಷತೆಯೇನು?
ಸುಮಾರು 130 ಎಕರೆಯ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಅಮೃತ ಆಸ್ಪತ್ರೆ, 7 ಅಂತಸ್ತಿನ ಸಂಶೋಧನಾ ಬ್ಲಾಕ್ ಅನ್ನು ಹೊಂದಿದೆ. ಮಾತಾ ಅಮೃತಾನಂದಮಯಿ ಟ್ರಸ್ಟ್ ವತಿಯಿಂದ 6 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.
ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 500 ಹಾಸಿಗೆಗಳನ್ನು ಈಗಾಗಲೇ ಬಳಕೆಗೆ ತೆರೆಯಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಒಮ್ಮೆ ಸಂಪೂರ್ಣವಾಗಿ ಈ ಆಸ್ಪತ್ರೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರೆ, ದೇಶದ ಅತಿ ದೊಡ್ಡ ಖಾಸಗಿ ಆಸ್ಪತ್ರೆಯಾಗಲಿದೆ. ಇದನ್ನೂ ಓದಿ: ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ
ಆಸ್ಪತ್ರೆಯ ಕಟ್ಟಡಗಳನ್ನು 36 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 14 ಮಹಡಿಗಳುಳ್ಳ ಕಟ್ಟಡದಲ್ಲಿ ಪ್ರಮುಖ ವೈದ್ಯಕೀಯ ಸೌಲಭ್ಯಗಳು ಇವೆ. ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್ ಕೂಡ ಇದೆ.
ದೆಹಲಿ-ಮಥುರಾ ರಸ್ತೆಯ ಬಳಿ ಫರಿದಾಬಾದ್‌ನ ಸೆಕ್ಟರ್ 88ರಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಕಾಲೇಜು ಕೂಡಾ ಇದೆ. ಕಟ್ಟಡದ 7 ಅಂತಸ್ತಿನಲ್ಲಿ ಸಂಶೋಧನಾ ವಿಭಾಗ, ಗ್ಯಾಸ್ಟ್ರೋ ವಿಜ್ಞಾನ, ಮೂತ್ರಪಿಂಡ ವಿಜ್ಞಾನ, ಮೂಳೆ ರೋಗಗಳು, ಅಪಘಾತ, ಕಸಿ ಮತ್ತು ತಾಯಿ-ಮಗುವಿನ ಆರೈಕೆ ಸೇರಿದಂತೆ 8 ವಿವಿಧ ಕೇಂದ್ರಗಳು ಕ್ಯಾಂಪಸ್‌ನಲ್ಲಿವೆ.