ಲಕ್ನೋ: ಕಿಸಾನ್ ನಿಧಿಯನ್ನು (PM-Kisan Samman Nidhi) ಪ್ರಧಾನಿ ಮೋದಿ ರಿಲೀಸ್ ಮಾಡಿದ್ದಾರೆ. ದೇಶದ ಒಟ್ಟು 9.26 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ಬಿಡುಗಡೆ ಮಾಡಿದರು.
ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಪಿಎಂ ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಮೋದಿ (Narendra Modi) ಮೊದಲ ಸಹಿ ಹಾಕಿದ್ರು. ಇಂದು ಸ್ವಕ್ಷೇತ್ರದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ, ಕೃಷಿ ಸಖಿಯರಾಗಿ ತರಬೇತಿ ಹೊಂದಿದ ಸ್ವಯಂ ಸಹಾಯಕ ತಂಡಗಳ ಮಹಿಳೆಯರಿಗೆ ಮೋದಿ ಪ್ರಮಾಣಪತ್ರ ವಿತರಿಸಿದರು. ಬಳಿಕ ವಾರಣಾಸಿಯ ದಶಾಶ್ವಮೇಧ ಘಾಟ್‍ನಲ್ಲಿ ನಡೆಯುವ ಗಂಗಾರತಿಯಲ್ಲಿ ಪ್ರಧಾನಿ ಮೋದಿ ಭಾಗಿಯಾದರು.
ಇದೇ ವೇಳೆ ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂರನೇ ಅವಧಿಯಲ್ಲಿ ರೈತರು ಮತ್ತು ಬಡವರಿಗೆ ಸಂಬಂಧಿಸಿದ ಮೊದಲ ನಿರ್ಧಾರ ತೆಗೆದುಕೊಂಡಿದ್ದೇನೆ. ದೇಶದಲ್ಲಿ ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಇದೆ. ಕಿಸಾನ್ ಸಮ್ಮಾನ್ ನಿಧಿ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದೇವೆ. ಈ ಯೋಜನೆಯು ಕೋಟ್ಯಂತರ ಜನರಿಗೆ ಲಾಭ ಮಾಡಲಿದೆ. ಇಂದು ಕೋಟ್ಯಂತರ ರೈತರು ನಮ್ಮ ಜೊತೆಗೆ ಸೇರಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ಫಲಾನುಭವಿಗೆ ನೇರ ಸರ್ಕಾರದ ಯೋಜನೆ ತಲುಪಿಸುತ್ತಿದೆ. ಯೋಜನೆಗೆ ಸೇರಲು ನಿಯಮಗಳನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೃಷಿಯಲ್ಲಿ ನಾವು ಇನ್ನಷ್ಟು ಸ್ವಾವಲಂಬಿಯಾಗಬೇಕಿದೆ ಎಂದು ಹೇಳಿದರು.
Prime Minister Shri @narendramodi transferred the 17th installment of PM Kisan Samman Yojana. With this, a sum of Rs. 20,000 crores deposited directly to over 9.26 crore beneficiaries.#PMKisanSamman pic.twitter.com/8Dezk45QeR
— Pralhad Joshi (@JoshiPralhad) June 18, 2024
ಭಾರತದ ಹಲವಾರು ತರಕಾರಿ ವಿದೇಶಿ ಮಾರುಕಟ್ಟೆ ತಲುಪುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದ ರಫ್ತು ಹೆಚ್ಚುತ್ತಿದೆ. ವಿಶ್ವದ ಪ್ರತಿ ಡೈನಿಂಗ್ ಟೇಬಲ್ ಮೇಲೆ ಭಾರತದ ಒಂದಲ್ಲ ಒಂದು ಉತ್ಪನ್ನ ಇರಬೇಕು ಎನ್ನುವುದು ನನ್ನ ಗುರಿ ಎಂದು ಅವರು ತಿಳಿಸಿದರು.
ಕೃಷಿ ಸಖಿ ಯೋಜನೆ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಗುರುತಿಸಲಾಗುವುದು. ಇದು ಲಕ್ ಪತಿ ದೀದಿಯನ್ನಾಗಿಸಲು ಅನುಕೂಲವಾಗಲಿದೆ. ಡೈರಿಗಳ ನಿರ್ಮಾಣದಿಂದ ರೈತರ ಬದುಕು ಬದಲಾಗಿದೆ. ಹಾಲಿನ ಉತ್ಪನ್ನ ದೊಡ್ಡ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. 40 ಸಾವಿರ ಜನರು ಸೋಲಾರ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಾಶಿ ಸುತ್ತಮುತ್ತಲಿನ ಸಾರಿಗೆ ಸಂಪರ್ಕ ಹೆಚ್ಚಿಸಿರುವುದು ಆರ್ಥಿಕತೆಗೆ ದೊಡ್ಡ ಶಕ್ತಿ ಸಿಕ್ಕಿದೆ ಎಂದು ಹೇಳಿದರು.
ಕಾಶಿಯ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿದೆ. ಕಾಶಿಯ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಬಾರಿಗೆ ಅವರ ಪ್ರತಿನಿಧಿಯಾಗಿ ‘ಮಾ ಗಂಗಾ ನೆ ಮುಝೆ ಗೊದ್ ಲೇ ಲಿಯಾ ಹೈ, ಮೈನ್ ಯಹೀಂ ಕಾ ಹೋ ಗಯಾ ಹೂಂ’. 18ನೇ ಲೋಕಸಭೆ ಚುನಾವಣೆಯಲ್ಲಿ ದೇಶದ 64 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸಿದ್ದಾರೆ. ಭಾರತದ ಚುನಾವಣೆ ವಿಶ್ವದ ಅತಿ ದೊಡ್ಡ ಚುನಾವಣೆ ಎಂದರು.
ನಾನು ಇತ್ತೀಚೆಗೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಹೋಗಿದ್ದೆ. ನಾವು ಜಿ7 ದೇಶಗಳ ಎಲ್ಲಾ ಮತದಾರರನ್ನು ಸೇರಿಸಿದರೂ ಭಾರತದ ಮತದಾರರ ಸಂಖ್ಯೆ 1.5 ಪಟ್ಟು ಹೆಚ್ಚಾಗುತ್ತದೆ. ಈ ಚುನಾವಣೆಯಲ್ಲಿ 31 ಕೋಟಿಗೂ ಹೆಚ್ಚು ಮಹಿಳಾ ಮತದಾರರು ಭಾಗವಹಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರು, ಈ ಸಂಖ್ಯೆಯು ಇಡೀ ಜನಸಂಖ್ಯೆಗೆ ಹತ್ತಿರವಾಗಿದೆ. ಈ ಸೌಂದರ್ಯ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯು ಇಡೀ ಜಗತ್ತನ್ನು ಆಕರ್ಷಿಸುತ್ತದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಕಾಶಿಯ ಜನರು ಮೂರನೇ ಬಾರಿಗೆ ಪ್ರಧಾನಿಯನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದೇಶದ ಜನತೆ ನೀಡಿದ ಜನಾದೇಶವು ಹೊಸ ಇತಿಹಾಸವನ್ನು ಸೃಷ್ಟಿಸಿದೆ ಎಂದು ಮೋದಿ ತಿಳಿಸಿದರು.