Monday, 16th July 2018

Recent News

ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

ಆಗ್ರಾ: ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದುಕೊಂಡು 75 ವರ್ಷ ಮೀರದ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್. ನೀವು ಬಯಸಿದ್ದಲ್ಲಿ ಮತ್ತೊಮ್ಮೆ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಬಹುದು.

ಹೌದು. ಕೇಂದ್ರ ಸರ್ಕಾರ ಈಗಾಗಲೇ ನಿವೃತ್ತರಾಗಿರುವ ಪ್ರಾಧ್ಯಾಪಕರಿಗೆ ಮತ್ತೊಮ್ಮೆ ಬೋಧನೆ ಮಾಡುವ ಅವಕಾಶ ನೀಡಲು ಮುಂದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ತಿಳಿಸಿದ್ದು, 75 ವರ್ಷ ಮೀರದ ಹಾಗೂ ಉತ್ತಮ ಸೇವಾ ದಾಖಲೆಯನ್ನು ಹೊಂದಿರುವ ನಿವೃತ್ತ ಪ್ರಾಧ್ಯಾಪಕರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

42 ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಪ್ರಾಧ್ಯಾಪಕರನ್ನು ಮರಳಿ ಕರೆತರುವ ಬಗ್ಗೆ ಚರ್ಚೆ ಸಚಿವರು ನಡೆಸಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದೆ. ಹೀಗಾಗಿ ಉತ್ತಮ ಸೇವಾ ದಾಖಲೆ ಹೊಂದಿರುವ ಪ್ರಾಧ್ಯಾಪಕರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

ವಿವಿಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ವಿದೇಶದಲ್ಲಿರುವ ಪ್ರಸಿದ್ಧ ವಿವಿಗಳಲ್ಲಿರುವ ಸಂಶೋಧಕರಿಗೂ ಅವಕಾಶ ನೀಡಲಾಗುವುದು. ವೈದ್ಯಕೀಯವಾಗಿ ಯಾರು ಆರೋಗ್ಯವಾಗಿರುತ್ತಾರೋ ಅಂತಹವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.53.28 ಮತ್ತು ನ್ಯಾಷನಲ್ ಇನ್ಸ್ ಟ್ಯೂಟ್ ಟೆಕ್ನಾಲಜಿ(ಎನ್‍ಐಟಿ) ಗಳಲ್ಲಿ ಶೇ.47% ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿದೆ.

ಮಾನವ ಸಂಪನ್ಮೂಲ ಸಚಿವಾಲಯದ ದಾಖಲೆಗಳ ಪ್ರಕಾರ ಹರ್ಯಾಣ ಕೇಂದ್ರೀಯ ವಿವಿಯಲ್ಲಿ ಏಪ್ರಿಲ್ 1,2017 ರ ಅವಧಿ ವರೆಗೆ ಶೇ.75.11 ಹುದ್ದೆಗಳು ಖಾಲಿ ಇದ್ದರೆ, ದೆಹಲಿಯ ವಿವಿಯಲ್ಲಿ ಶೇ.54.75% ಹುದ್ದೆಗಳು ಖಾಲಿಯಿವೆ.

Leave a Reply

Your email address will not be published. Required fields are marked *