ನವದೆಹಲಿ: ಹಜ್ ಯಾತ್ರೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನ ಈ ವರ್ಷದಿಂದ ರದ್ದಾಗಿದೆ ಎಂದು ಮಂಗಳವಾರ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ಜಾರಿ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಅವರು, 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿದ್ದು, ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.
Advertisement
Advertisement
ಕೇಂದ್ರ ಸರ್ಕಾರ ಈಗಾಗಲೇ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆಗೆ ಸಂಬಂಧಿಸಿದಂತೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿದ ಮರು ದಿನವೇ ಸಬ್ಸಿಡಿ ರದ್ದು ಮಾಡುವ ನಿರ್ಣಯವನ್ನು ಘೋಷಿಸಿದೆ.
Advertisement
ಕೇಂದ್ರ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವಾಲಯ ಕಳೆದ ವರ್ಷ ಹಜ್ ಯಾತ್ರೆ ಕೈಗೊಳ್ಳುವ 2018-22 ರ ವರ್ಷದ ನಿಯಮಗಳನ್ನು ರೂಪಿಸಲು ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ನೀಡಿದ ಶಿಪಾರಸ್ಸುಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Advertisement
ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ 2018ರ ಹಜ್ ಯಾತ್ರೆಯು ಹೊಸ ನಿಯಮಗಳು ರೂಪುಗೊಳ್ಳುತ್ತವೆ. ಈ ಸಮಿತಿಯ ನಿಯಮಗಳು ಉತ್ತಮವಾಗಿದ್ದು, ಪಾರದರ್ಶಕ ಮತ್ತು ಜನಸ್ನೇಹಿಯಾಗಿವೆ. ಅಲ್ಲದೇ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ. ಅಲ್ಲದೇ ಈ ನಿಯಮಗಳು ಅಲ್ಪ ಸಂಖ್ಯಾತರ ಘನತೆ ಹಾಗೂ ಮನಃಪೂರ್ವಕವಾಗಿ ಅಧಿಕಾರ ನೀಡುವುದು ಸಮಿತಿ ನೀತಿ ಭಾಗವಾಗಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಪಷ್ಟಪಡಿಸಿದರು.
ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದರು.
ರೋಷನ್ ಬೇಗ್ ಸ್ವಾಗತ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ವಕ್ಫ್ ಖಾತೆಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ಹಜ್ ಪವಿತ್ರ ಯಾತ್ರೆಯಾಗಿದ್ದು, ಬೇರೆಯವರಿಂದ ಸಹಾಯ ಪಡೆದು ಯಾತ್ರೆ ಹೋಗಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ಹೇಳಿದ್ದೇನು?
ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.
ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳು ಏನಿತ್ತು?
ಹಜ್ ಯಾತ್ರೆ ಕೈಗೊಳ್ಳಲು ಇದುವರೆಗೂ ವಿಮಾನ ಪ್ರಯಾಣದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ ಹಡಗು ಯಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು.
ಯಾತ್ರೆಯ ವೇಳೆ ಮಹಿಳೆಯ ಯಾತ್ರಿಕರ ಜೊತೆ ಪುರುಷ ಸಂಬಂಧಿ ಇರಬೇಕು ಎಂಬ ನಿಯಮವನ್ನು ರದ್ದಾಗಬೇಕು. 45ಕ್ಕಿಂತ ಹೆಚ್ಚು ವರ್ಷ ಮೇಲ್ಪಟ್ಟ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ, ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು.